ಕಾರಂಜಾ ಜಲಾಶಯದಲ್ಲಿ ಮೀನು ಉತ್ಪಾದನೆ ಕುಸಿತ; ಸಂಕಷ್ಟದಲ್ಲಿ ಮೀನುಗಾರರ ಬದುಕು
ಮೀನು ಮರಿ ಬಿಡದಿರುವುದು, ಅಕ್ರಮ ಮೀನುಗಾರಿಕೆ ವಿರುದ್ಧ ಕ್ರಮದ ಕೊರತೆ ಆರೋಪ; ಇಲಾಖೆ ಮಧ್ಯಪ್ರವೇಶಕ್ಕೆ ಆಗ್ರಹ

ಬೀದರ್, ಜು.24: ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಾರಂಜಾ ಜಲಾಶಯದಲ್ಲಿ ಮೀನು ಉತ್ಪಾದನೆ ತೀವ್ರವಾಗಿ ಕುಸಿದಿರುವುದರಿಂದ ಸ್ಥಳೀಯ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಲಾಶಯದಲ್ಲಿ ನಿಯಮಿತವಾಗಿ ಮೀನು ಮರಿಗಳನ್ನು ಬಿಡದಿರುವುದು ಹಾಗೂ ಅಕ್ರಮ ಮೀನುಗಾರಿಕೆಗೆ ಕಡಿವಾಣ ಹಾಕದಿರುವುದೇ ಸಮಸ್ಯೆಗೆ ಪ್ರಮುಖ ಕಾರಣ ಎಂದು ಮೀನುಗಾರರು ಆರೋಪಿಸಿದ್ದಾರೆ.
ಕಾರಂಜಾ ಜಲಾಶಯವನ್ನೇ ಅವಲಂಬಿಸಿ ಸುಮಾರು 200ಕ್ಕೂ ಹೆಚ್ಚು ಪರವಾನಗಿ ಪಡೆದ ಮೀನುಗಾರರು ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಬಲೆ ಹಾಕಿದರೂ ಸಮರ್ಪಕ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಪ್ರತಿ ವರ್ಷ ಜಲಾಶಯದಲ್ಲಿ ಮೀನು ಮರಿಗಳನ್ನು ಬಿಡಬೇಕಾದ ಮೀನುಗಾರಿಕೆ ಇಲಾಖೆ ಈ ಬಾರಿ ಆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಇದರ ಪರಿಣಾಮವಾಗಿ ಮೀನುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಮೀನುಗಾರಿಕೆಯನ್ನು ಅವಲಂಬಿಸಿರುವ ಕುಟುಂಬಗಳ ಆದಾಯಕ್ಕೂ ಭಾರೀ ಹೊಡೆತ ಬಿದ್ದಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
ಸರ್ಕಾರದಿಂದ ಅಧಿಕೃತ ಪರವಾನಗಿ ಪಡೆದು ಬಲೆ, ದೋಣಿ, ಡೀಸೆಲ್ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸುತ್ತಿದ್ದರೂ, ಆದಾಯ ಮಾತ್ರ ಶೂನ್ಯಕ್ಕೆ ಸಮನಾಗಿದೆ. ಹಿಂದೆ ಪ್ರತಿದಿನ ಉತ್ತಮ ಪ್ರಮಾಣದಲ್ಲಿ ಮೀನು ದೊರೆಯುತ್ತಿತ್ತು. ಈಗ ಹಲವಾರು ದಿನಗಳಿಂದ ಬಲೆಗೆ ಕೆಲವೇ ಮೀನುಗಳು ಬೀಳುತ್ತಿದ್ದು, ಕೆಲವು ದಿನಗಳಲ್ಲಿ ಒಂದೂ ಮೀನು ಸಿಗದೆ ಖಾಲಿ ಕೈಯಲ್ಲಿ ಮನೆಗೆ ಮರಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ತೆಲಂಗಾಣದಿಂದ ಬರುವ ಕೆಲವರು ರಾತ್ರಿ ವೇಳೆ ನಿಯಮ ಉಲ್ಲಂಘಿಸಿ ಜಲಾಶಯದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಸ್ಥಳೀಯ ಪರವಾನಗಿ ಪಡೆದ ಮೀನುಗಾರರಿಗೆ ಮತ್ತಷ್ಟು ನಷ್ಟ ಉಂಟಾಗುತ್ತಿದೆ ಎಂದು ದೂರಿದ್ದಾರೆ.
ಈ ಕುರಿತು ಹಲವು ಬಾರಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ. ಕಾರಂಜಾ ಜಲಾಶಯದಲ್ಲಿ ತಕ್ಷಣ ಮೀನು ಮರಿಗಳನ್ನು ಬಿಡಬೇಕು ಹಾಗೂ ಅಕ್ರಮ ಮೀನುಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೀನುಗಾರಿಕೆ ಇಲಾಖೆಯ ನಿರ್ಲಕ್ಷ್ಯದಿಂದ ಸರ್ಕಾರಕ್ಕೂ ಆದಾಯ ತರುವ ಮೀನುಗಾರಿಕೆ ಕ್ಷೇತ್ರವೇ ಹಿನ್ನಡೆ ಅನುಭವಿಸುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದು, ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಹಾಗೂ ಮೀನುಗಾರಿಕೆ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



