ಸಮಾಜ

ನಾರಾಯಣ ಗುರುಗಳ ಸಮಾನತೆಯ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪ: ಪ್ರಿಯಾಂಕ ಖರ್ಗೆ

ಹಿಂದುಳಿದವರು, ದಲಿತರು ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ಸಮಾಜ ಸುಧಾರಕನ ತತ್ವಗಳು ಬದುಕಿನಲ್ಲಿ ಅಳವಡಿಕೆಯಾಗಲಿ

ಕಲಬುರಗಿ, ಸೆ.1: ಹಿಂದುಳಿದ ವರ್ಗಗಳು, ದಲಿತರು ಹಾಗೂ ಮಹಿಳೆಯರ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಕ್ರಾಂತಿಕಾರಿ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ಧ, ಬಸವಣ್ಣ, ನಾರಾಯಣ ಗುರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ನೆಲೆಯಲ್ಲಿಯೇ ಒಂದಾಗುತ್ತವೆ. ಈ ಮಹಾಪುರುಷರ ತತ್ವಗಳು ಕೇವಲ ಜಯಂತಿ ಆಚರಣೆ ಮತ್ತು ಭಾಷಣಗಳಿಗೆ ಸೀಮಿತವಾಗದೆ ಪ್ರತಿಯೊಬ್ಬರ ಜೀವನದಲ್ಲೂ ಅನುಷ್ಠಾನಗೊಳ್ಳಬೇಕು ಎಂದು ಕರೆ ನೀಡಿದರು.

ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುವ ಬದಲು ಮಹಾಪುರುಷರ ವಿಚಾರಧಾರೆಗಳನ್ನು ಓದಿ, ಅರ್ಥೈಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸಬೇಕು. ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಸಮಬಾಳು ಮತ್ತು ಸಮಪಾಲು ನೀಡುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಸ್ಥಿರತೆ ತರಲು ಸಹಕಾರಿಯಾಗುತ್ತಿವೆ ಎಂದರು.

ಕಲಬುರಗಿಯಲ್ಲಿ ನಾರಾಯಣ ಗುರು ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ಸಮಾಜದ ಭವನ ನಿರ್ಮಾಣಕ್ಕೆ ಅಗತ್ಯವಿರುವ 1ರಿಂದ 2 ಎಕರೆ ಜಮೀನು ಒದಗಿಸುವ ನಿಟ್ಟಿನಲ್ಲಿಯೂ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ಸಾಮಾಜಿಕ ಕ್ರಾಂತಿಯ ಹರಿಕಾರ ನಾರಾಯಣ ಗುರು

ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಲಲ್ಲೂ ಮಾತನಾಡಿ, ಬ್ರಹ್ಮರ್ಷಿ ನಾರಾಯಣ ಗುರುಗಳು ಸಮಾಜದಲ್ಲಿದ್ದ ಅಸ್ಪೃಶ್ಯತೆ ಮತ್ತು ತಾರತಮ್ಯದ ವಿರುದ್ಧ ಹೋರಾಡಿದ ಮಹಾನ್ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರು ಎಂದರು.

ಸ್ವಾತಂತ್ರ್ಯಕ್ಕೂ ಮುನ್ನವೇ ಮೂಢನಂಬಿಕೆಗಳನ್ನು ತೊಡೆದುಹಾಕಲು ನಾರಾಯಣ ಗುರುಗಳು 60ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿ, ಅವುಗಳೊಂದಿಗೆ ಶಾಲೆಗಳನ್ನೂ ಆರಂಭಿಸುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಕೇರಳದಲ್ಲಿ ಶೈಕ್ಷಣಿಕ ಜಾಗೃತಿ ಮೂಡಲು ಅವರ ಕ್ರಾಂತಿಕಾರಿ ಚಿಂತನೆಗಳು ಪ್ರಮುಖ ಕಾರಣವಾಗಿವೆ ಎಂದು ಹೇಳಿದರು.

1925ರ ವೈಕಂ ಸತ್ಯಾಗ್ರಹದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ನಾರಾಯಣ ಗುರುಗಳ ಆಶ್ರಮಕ್ಕೆ ಭೇಟಿ ನೀಡಿ ಅವರ ವಿಚಾರಗಳಿಂದ ಪ್ರೇರಣೆ ಪಡೆದಿದ್ದರು ಎಂದು ತಿಳಿಸಿದರು.

ಶಿಕ್ಷಣ, ಸಂಘಟನೆಗೆ ಒತ್ತು ನೀಡಬೇಕು

ಶ್ರೀ ನಾರಾಯಣ ಗುರು ಮಹಾಸಂಸ್ಥಾನ ನಿಟ್ಟೂರು ಪೀಠಾಧಿಪತಿ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ನಾರಾಯಣ ಗುರುಗಳ ಶಿಕ್ಷಣ ಮತ್ತು ಸಂಘಟನೆಯ ತತ್ವಗಳನ್ನು ಸಮಾಜದಲ್ಲಿ ಸಕ್ರಿಯವಾಗಿ ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದರು.

ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಶಾಸಕ ಜಗದೇವ್ ಗುತ್ತೇದಾರ್ ಅವರ ನೇತೃತ್ವದಲ್ಲಿ ಸಮಾಜದ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿಗಾಗಿ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ರಾಜೇಶ್ ಗುತ್ತೇದಾರ್ ಮಾತನಾಡಿ, ನಾರಾಯಣ ಗುರುಗಳ ಹೆಸರಿನಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ಹಾಗೂ ಸಮುದಾಯ ಭವನ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ. ಪಕ್ಷಾತೀತವಾಗಿ ಸಮಾಜದ ಒಳಿತಿಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ

ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ವಿಶೇಷ ಉಪನ್ಯಾಸ ನೀಡಿ, ಶತಮಾನಗಳ ಹಿಂದೆ ಕೇರಳದಲ್ಲಿ ತೀವ್ರವಾಗಿದ್ದ ಜಾತ್ಯಂಧತೆ ಮತ್ತು ಸಾಮಾಜಿಕ ಶೋಷಣೆಗಳ ವಿರುದ್ಧ ಹೋರಾಡಿದ ನಾರಾಯಣ ಗುರುಗಳು ಮಹತ್ವದ ಸಾಮಾಜಿಕ ಸುಧಾರಣೆಗೆ ಕಾರಣರಾದರು ಎಂದರು.

ಹಿಂದುಳಿದ ಸಮುದಾಯಗಳಿಗೆ ದೇವಸ್ಥಾನ ಪ್ರವೇಶ, ಶಿಕ್ಷಣ ಹಾಗೂ ಸಂಚಾರದ ಹಕ್ಕು ದೊರಕಿಸುವ ನಿಟ್ಟಿನಲ್ಲಿ ಅವರು ಹೋರಾಟ ನಡೆಸಿದರು. ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ವೈಕಂ ಸತ್ಯಾಗ್ರಹವು ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ಪ್ರೇರಣೆಯಾಯಿತು ಎಂದು ಹೇಳಿದರು.

ನಾರಾಯಣ ಗುರುಗಳ ಶಿಷ್ಯರಾದ ಡಾ. ಪದ್ಮನಾಭ್ ಅವರಿಗೆ ಕೇರಳದಲ್ಲಿ ಅವಕಾಶ ನಿರಾಕರಿಸಲ್ಪಟ್ಟ ಸಂದರ್ಭದಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉದ್ಯೋಗ ನೀಡಿ ಗೌರವಿಸಿದ್ದು ಇತಿಹಾಸದಲ್ಲಿ ಮಹತ್ವದ ಘಟನೆ ಎಂದು ವಿವರಿಸಿದರು.

‘ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು’ ಎಂಬ ನಾರಾಯಣ ಗುರುಗಳ ತತ್ವವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಯಿತು. ಇಂದಿನ ಅಸಮಾನತೆಯ ಸಮಾಜದಲ್ಲಿಯೂ ಅವರ ವಿಚಾರಧಾರೆ ಅತ್ಯಂತ ಪ್ರಸ್ತುತವಾಗಿದೆ ಎಂದು ಹೇಳಿದರು.

ಯುವಜನರಿಗೆ ಉನ್ನತ ಶಿಕ್ಷಣ ಸೌಲಭ್ಯ ಅಗತ್ಯ

ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ ಮಾತನಾಡಿ, ಜಿಲ್ಲೆಯ ಸಮಾಜದ ಯುವಜನರು ಶೈಕ್ಷಣಿಕವಾಗಿ ಮುನ್ನಡೆಯಲು ಉನ್ನತ ಶಿಕ್ಷಣದ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಸಮಾಜದ ಆಸ್ತಿಯನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯುವಂತೆ ಸಮಾಜದ ನಾಯಕರು ಬೆಂಬಲ ನೀಡಬೇಕು. ಹೆಲಿಪುರದಲ್ಲಿರುವ ಸಮಾಜದ 7 ಎಕರೆ ಜಮೀನನ್ನು ಕಾನೂನುಬದ್ಧವಾಗಿ ಸಂರಕ್ಷಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಜಗದೀಶ್ವರಿ ಅ. ನಾಸಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಅಫಜಲಪುರ ಶಾಸಕ ಎಂ.ವೈ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಹಾಗೂ ಜಗದೇವ್ ಗುತ್ತೇದಾರ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತೋತ್ಸವ ಸಮಿತಿ ಅಧ್ಯಕ್ಷ ಅಶೋಕ ಕಲಾಲ ಸನ್ನತಿ, ಕಲಬುರಗಿ ಆರ್ಯ ಈಡಿಗ ಸಮಾಜ ಸಂಘದ ಅಧ್ಯಕ್ಷ ರಾಜೇಶ್ ಜಗದೇವ್ ಗುತ್ತೇದಾರ್, ಬಸಯ್ಯ ಗುತ್ತೇದಾರ್, ಗಾರಂಪಳ್ಳಿ, ಮಹಾದೇವಿ ಬಿ. ಗುತ್ತೇದಾರ್, ರಾಜೇಶ್ ಡಿ. ಗುತ್ತೇದಾರ್, ವಿನೋದ್ ಕುಮಾರ್ ಗುತ್ತೇದಾರ್, ನಾಗರಾಜ ಗುತ್ತೇದಾರ್, ಜಮುನಾ ಅಶೋಕ್ ಗುತ್ತೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button