ಧಾರ್ಮಿಕಸಾಂಸ್ಕೃತಿಕ

ಹಳಕಟ್ಟಿ, ಉತ್ತಂಗಿ ಚೆನ್ನಪ್ಪ, ಹರ್ಡೇಕರ್ ಮಂಜಪ್ಪ ಲಿಂಗಾಯತ ರತ್ನತ್ರಯರು: ರಮೇಶ್ ಮಠಪತಿ

ಲಿಂಗಾಯತ ಮಹಾಮಠದಲ್ಲಿ ನಡೆದ ಶರಣ ಸಂಗಮದಲ್ಲಿ ವಚನ ಸಾಹಿತ್ಯ ಸಂರಕ್ಷಣೆ ಹಾಗೂ ಬಸವ ತತ್ವ ಪ್ರಸಾರಕ್ಕೆ ಮೂವರು ಮಹನೀಯರ ಕೊಡುಗೆ ಸ್ಮರಣೆ.

ಬೀದರ್, ಜು.25: ಡಾ. ಎಫ್.ಜಿ. ಹಳಕಟ್ಟಿ, ರೆವರೆಂಡ್ ಉತ್ತಂಗಿ ಚೆನ್ನಪ್ಪ ಹಾಗೂ ಹರ್ಡೇಕರ್ ಮಂಜಪ್ಪ ಅವರು 19 ಮತ್ತು 20ನೇ ಶತಮಾನದ ಲಿಂಗಾಯತ ಸಮಾಜದ ರತ್ನತ್ರಯರು ಎಂದು ಸಾಹಿತಿ ರಮೇಶ್ ಮಠಪತಿ ಅಭಿಪ್ರಾಯಪಟ್ಟರು.

ನಗರದ ಲಿಂಗಾಯತ ಮಹಾಮಠದಲ್ಲಿ ಆಯೋಜಿಸಿದ್ದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ “ಲಿಂಗಾಯತ ರತ್ನತ್ರಯರು” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ವಚನ ಧರ್ಮದ ಉಳಿವು ಮತ್ತು ಪ್ರಸಾರಕ್ಕಾಗಿ ಈ ಮೂವರು ಮಹನೀಯರು ಅಪಾರ ತ್ಯಾಗ, ಪರಿಶ್ರಮ ಹಾಗೂ ಸಮರ್ಪಣೆಯ ಜೀವನ ನಡೆಸಿದ್ದಾರೆ ಎಂದು ಹೇಳಿದರು.

ಡಾ. ಎಫ್.ಜಿ. ಹಳಕಟ್ಟಿ ಅವರು ಶತಮಾನಗಳ ಕಾಲ ಚದುರಿಹೋಗಿದ್ದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಶೋಧಿಸಿ, ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದರು. ವಕೀಲ ವೃತ್ತಿಯನ್ನು ತೊರೆದು ವಚನ ಸಾಹಿತ್ಯದ ಸೇವೆಗೆ ತಮ್ಮ ಜೀವನವನ್ನೇ ಅರ್ಪಿಸಿದ ಅವರು, ‘ಶಿವಾನುಭವ’ ಪತ್ರಿಕೆಯ ಮೂಲಕ ವಚನಗಳ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿದರು. ಕರ್ನಾಟಕ ಏಕೀಕರಣಕ್ಕೂ ಅವರು ಮಹತ್ವದ ಸೇವೆ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ರೆವರೆಂಡ್ ಉತ್ತಂಗಿ ಚೆನ್ನಪ್ಪ ಅವರು ವಚನ ಸಾಹಿತ್ಯದ ಸಂಶೋಧನೆ ನಡೆಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಬಸವ ಧರ್ಮದ ಕುರಿತು ಮೂಡಿದ್ದ ಅನೇಕ ಅನುಮಾನಗಳಿಗೆ ವಚನಗಳ ಆಧಾರದ ಮೇಲೆ ಸಮರ್ಥ ಉತ್ತರಗಳನ್ನು ನೀಡಿ, ಐತಿಹಾಸಿಕ ಸತ್ಯಗಳನ್ನು ಜನರಿಗೆ ಪರಿಚಯಿಸಿದರು. ಅವರ ಪ್ರೇರಣೆಯಿಂದ ಅಕ್ಕ ಅನ್ನಪೂರ್ಣತಾಯಿ ಸೇರಿದಂತೆ ಅನೇಕರು ಲಿಂಗಾಯತ ಧರ್ಮಗ್ರಂಥಗಳ ರಚನೆ ಹಾಗೂ ಪ್ರಸಾರದಲ್ಲಿ ತೊಡಗಿಕೊಂಡರು ಎಂದು ತಿಳಿಸಿದರು.

ಹರ್ಡೇಕರ್ ಮಂಜಪ್ಪ ಅವರು 1913ರಲ್ಲಿ ಸಾರ್ವಜನಿಕ ಬಸವ ಜಯಂತಿ ಆಚರಣೆಗೆ ಚಾಲನೆ ನೀಡಿ, ಬಸವ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಶರಣ ತತ್ವಕ್ಕೆ ಸಂಬಂಧಿಸಿದ ಅನೇಕ ಕೃತಿಗಳನ್ನು ರಚಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಿದರು ಎಂದು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ಹರ್ಡೇಕರ್ ಮಂಜಪ್ಪ ಅವರು ಶರಣ ತತ್ವದ ಕುರಿತು 82ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಬಸವಣ್ಣನವರ ವಿಚಾರಗಳನ್ನು ದೇಶದಾದ್ಯಂತ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ವಚನಗಳು ಮಾನವ ಜೀವನದ ಮೌಲ್ಯಗಳನ್ನು ಸಾರುವ ಅಮೂಲ್ಯ ಸಂದೇಶಗಳಾಗಿವೆ. ಅವುಗಳನ್ನು ಉಳಿಸಿ ಬೆಳೆಸಿದ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ನಿವೃತ್ತ ಮುಖ್ಯ ಯೋಜನಾಧಿಕಾರಿ ಶರಣಬಸವ ಮಠಪತಿ, ಗುರುಮಠಕಲ್ ಸರ್ಕಾರಿ ಐಟಿಐ ನಿವೃತ್ತ ಪ್ರಾಚಾರ್ಯ ಕಲ್ಲಪ್ಪ ಡಿಗ್ಗಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ರಾಜಮ್ಮ ಚಿಕ್ಕಪೇಟೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾನಂದ ಶ್ರೀಕಾಂತ ಅಧ್ಯಕ್ಷತೆ ವಹಿಸಿದ್ದರು. ಪ್ರಕೃತಿ ಮಹಾಂತೇಶ ಹಾಗೂ ಗುರುಶ್ರೀ ವಚನ ಗಾಯನ ನಡೆಸಿದರು. ನೀಲಮ್ಮನ ಬಳಗದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಶ್ರೇಯಸ್ ಪಾಟೀಲ ಗುರುಪೂಜೆ ನೆರವೇರಿಸಿದರು. ಸಂಧ್ಯಾರಾಣಿ ಮುತ್ತಂಗೆ ಸ್ವಾಗತಿಸಿದರು. ವರ್ಷಾ ಸಂತೋಷ್ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಮಠದ ಭಕ್ತರು, ಸಾಹಿತ್ಯಾಸಕ್ತರು ಹಾಗೂ ಶರಣ ಪರಂಪರೆಯ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button