ಜಿಲ್ಲಾಸುದ್ದಿ

ಕರ್ನಾಟಕ–ಮಧ್ಯಪ್ರದೇಶ ಯುವ ಸಂಗಮಕ್ಕೆ ಸಿದ್ಧತೆಸೆ.28ಕ್ಕೆ ಕಲಬುರಗಿಗೆ 51 ವಿದ್ಯಾರ್ಥಿಗಳ ನಿಯೋಗ; ಅ.10ಕ್ಕೆ 50 ವಿದ್ಯಾರ್ಥಿಗಳು ಮಧ್ಯಪ್ರದೇಶಕ್ಕೆ

ಕಲಬುರಗಿ, ಸೆ.26: ಕರ್ನಾಟಕ ಮತ್ತು ಮಧ್ಯಪ್ರದೇಶದ ಯುವಜನರ ನಡುವೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಬಾಂಧವ್ಯ ಬೆಳೆಸುವ ಉದ್ದೇಶದಿಂದ ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಡಿ 7ನೇ ಹಂತದ ‘ಯುವ ಸಂಗಮ’ ಆಯೋಜಿಸಲಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದರು.

ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.28ರಿಂದ ಅ.3ರವರೆಗೆ ಮಧ್ಯಪ್ರದೇಶದ 51 ವಿದ್ಯಾರ್ಥಿಗಳ ನಿಯೋಗ ಕರ್ನಾಟಕಕ್ಕೆ ಭೇಟಿ ನೀಡಲಿದೆ. ವಿದ್ಯಾರ್ಥಿಗಳು ರಾಜ್ಯದ ಕಲೆ, ಸಂಸ್ಕೃತಿ, ಪರಂಪರೆ, ಶಿಕ್ಷಣ, ಕೈಗಾರಿಕೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದು, ವಿವಿಧೆಡೆ ಯುವಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.ಕಲಬುರಗಿಯಿಂದ ಪ್ರವಾಸ ಆರಂಭಮಧ್ಯಪ್ರದೇಶದ ವಿದ್ಯಾರ್ಥಿಗಳ ತಂಡ ಸೆ.28ರಂದು ಕಲಬುರಗಿಯ ಸಿಯುಕೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಮೂಲಕ ಪ್ರವಾಸ ಆರಂಭಿಸಲಿದೆ.

ಬಳಿಕ ಆಳಂದ ತಾಲ್ಲೂಕಿನ ತೆಲ್ಲೂರ ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದೆ. ನಂತರ ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಸಾವಯವ ಬೆಲ್ಲ ತಯಾರಿಕಾ ಘಟಕ, ಬೀದರ್ ಕೋಟೆ ಹಾಗೂ ಬಿದರಿ ಕರಕುಶಲ ಕಲಾವಿದರನ್ನು ಭೇಟಿ ಮಾಡಲಿದೆ.ಬಳಿಕ ಬೆಂಗಳೂರಿಗೆ ತೆರಳುವ ನಿಯೋಗವು ಲೋಕಭವನ, ಇಸ್ರೋ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಸೇರಿದಂತೆ ವಿವಿಧ ಐತಿಹಾಸಿಕ, ಶೈಕ್ಷಣಿಕ ಹಾಗೂ ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಲಿದೆ ಎಂದು ಅವರು ವಿವರಿಸಿದರು.

ಅ.10ರಿಂದ ಮಧ್ಯಪ್ರದೇಶಕ್ಕೆ ಕರ್ನಾಟಕದ 50 ವಿದ್ಯಾರ್ಥಿಗಳುಕರ್ನಾಟಕದ ಎಲ್ಲ 31 ಜಿಲ್ಲೆಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳ ಪೈಕಿ ಕಲ್ಯಾಣ ಕರ್ನಾಟಕದ 18 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 50 ವಿದ್ಯಾರ್ಥಿಗಳ ನಿಯೋಗವು ಅ.10ರಿಂದ 17ರವರೆಗೆ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದೆ. ನಿಯೋಗದಲ್ಲಿ 26 ವಿದ್ಯಾರ್ಥಿನಿಯರು, 24 ವಿದ್ಯಾರ್ಥಿಗಳು ಹಾಗೂ ಮೂವರು ಅಧ್ಯಾಪಕ ಸಂಯೋಜಕರು ಇರಲಿದ್ದಾರೆ.ಭೋಪಾಲ್, ಭೋಜ್‌ಪುರ, ಇಂದೋರ್, ರಾಜವಾಡಾ, ಸಾಂಚಿ ಸ್ತೂಪ ಸೇರಿದಂತೆ ವಿವಿಧ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಥಳಗಳಿಗೆ ನಿಯೋಗ ಭೇಟಿ ನೀಡಲಿದೆ.

ಲೋಕಭವನ, ವಿಧಾನಸಭೆ ಹಾಗೂ ಮುಖ್ಯಮಂತ್ರಿ ನಿವಾಸಕ್ಕೂ ಭೇಟಿ ನೀಡಿ ಅಲ್ಲಿನ ಸಾಂಸ್ಕೃತಿಕ ಪರಂಪರೆ ಮತ್ತು ಆಡಳಿತ ವ್ಯವಸ್ಥೆಯ ಕುರಿತು ತಿಳಿದುಕೊಳ್ಳಲಿದೆ ಎಂದು ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.ಪ್ರವಾಸೋದ್ಯಮ, ಪರಂಪರೆ, ಪ್ರಗತಿ, ಸಂಪರ್ಕ, ತಂತ್ರಜ್ಞಾನ‘ಯುವ ಸಂಗಮ’ ಕಾರ್ಯಕ್ರಮವು ಪ್ರವಾಸೋದ್ಯಮ, ಪರಂಪರೆ, ಪ್ರಗತಿ, ಪರಸ್ಪರ ಸಂಪರ್ಕ ಮತ್ತು ತಂತ್ರಜ್ಞಾನ ಎಂಬ ಐದು ಪ್ರಮುಖ ವಿಷಯಗಳ ಮೇಲೆ ಕೇಂದ್ರಿತವಾಗಿದೆ. ದೇಶದ ವಿವಿಧ ಭಾಗಗಳ ಯುವಜನರು ಪರಸ್ಪರ ಸಂವಾದ ನಡೆಸಿ, ಭಾರತದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಅಭಿವೃದ್ಧಿಪರ ವೈವಿಧ್ಯತೆಯನ್ನು ನೇರವಾಗಿ ಅನುಭವಿಸಲು ಈ ಕಾರ್ಯಕ್ರಮ ವೇದಿಕೆ ಕಲ್ಪಿಸುತ್ತದೆ ಎಂದು ಅವರು ಹೇಳಿದರು.ಕರ್ನಾಟಕ ಮತ್ತು ಮಧ್ಯಪ್ರದೇಶದ ಯುವಜನರು ಪರಸ್ಪರರ ಸಾಂಸ್ಕೃತಿಕ ಸಂಪ್ರದಾಯಗಳನ್ನು ಪರಿಚಯಿಸಿಕೊಳ್ಳಲು ಹಾಗೂ ವೈವಿಧ್ಯಮಯ ಭಾರತೀಯ ಪರಂಪರೆಯ ಕುರಿತು ಅರಿವು ಬೆಳೆಸಿಕೊಳ್ಳಲು ಈ ವಿನಿಮಯ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.

ಕರ್ನಾಟಕದಲ್ಲಿ ಸಿಯುಕೆ ಮತ್ತು ಮಧ್ಯಪ್ರದೇಶದಲ್ಲಿ ಭೋಪಾಲ್ ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್ ಸಂಸ್ಥೆಗಳು ಕಾರ್ಯಕ್ರಮದ ಸಮನ್ವಯ ಹಾಗೂ ನಿಯೋಗಗಳ ಆತಿಥ್ಯದ ಜವಾಬ್ದಾರಿ ವಹಿಸಿವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ‘ಯುವ ಸಂಗಮ’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಗಣಪತಿ ಬಿ. ಸಿನ್ನೂರ್, ಸಹಾಯಕ ಕುಲಸಚಿವ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕಾಂತ ಎಂ. ಕುಸೂರ, ಕಾನೂನು ನಿಕಾಯದ ಡೀನ್ ಪ್ರೊ. ಬಸವರಾಜ ಎಂ. ಕುಬ್ಬಕಡ್ಡಿ, ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ವೆಂಕಟರಮಣದೊಡ್ಡಿ, ಯುವ ಸಂಗಮ ನೋಡಲ್ ಅಧಿಕಾರಿ ಡಾ. ಶಿವಾ ಹಾಗೂ ಕಾರ್ಯಕ್ರಮ ಸಂಚಾಲಕ ಡಾ. ಜಗದೀಶ ಬಿರಾದರ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button