ಎನ್ಯೂಮರೇಷನ್ ಫಾರ್ಮ್‌ಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿ: ಭಗವಂತ ಖೂಬಾ ಮನವಿ
ಮನೆ-ಮನೆ ಸಂಪರ್ಕ ಅಭಿಯಾನದಲ್ಲಿ ಮತದಾರರಿಗೆ ಜಾಗೃತಿ ಮೂಡಿಸಿದ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ; ಫಾರ್ಮ್‌ಗಳನ್ನು ವಿಳಂಬಿಸದೆ ಬಿಎಲ್‌ಒಗಳಿಗೆ ಸಲ್ಲಿಸಲು ಕರೆ.

ಬೀದರ್, ಜು.25: ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿರುವ ಎಸ್‌ಐಆರ್ ಮನೆ-ಮನೆ ಸಂಪರ್ಕ ಅಭಿಯಾನದ ಅಂಗವಾಗಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್ ನಗರದ ವಾರ್ಡ್ ಸಂಖ್ಯೆ 18ರ ಬೂತ್ ಸಂಖ್ಯೆ 155 ವ್ಯಾಪ್ತಿಯಲ್ಲಿ ಮನೆ-ಮನೆಗೆ ಭೇಟಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆ ಕೆಲವು ಕುಟುಂಬಗಳಲ್ಲಿ ಇನ್ನೂ ಎನ್ಯೂಮರೇಷನ್ (ಗಣತಿ) ಫಾರ್ಮ್‌ಗಳನ್ನು ಭರ್ತಿ ಮಾಡದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಖೂಬಾ ಅವರು ಸ್ವತಃ ಮತದಾರರಿಗೆ ಫಾರ್ಮ್‌ಗಳನ್ನು ಭರ್ತಿ ಮಾಡಿಸಿ, ಅವುಗಳನ್ನು ಕೂಡಲೇ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸಲ್ಲಿಸಿ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಮತದಾರರೊಂದಿಗೆ ಸಂವಾದ ನಡೆಸಿದ ಅವರು, ಅನೇಕರು ಈಗಾಗಲೇ ಫಾರ್ಮ್‌ಗಳನ್ನು ಭರ್ತಿ ಮಾಡಿ ಸಲ್ಲಿಸಿದ್ದರೂ, ಕೆಲವರು ಭರ್ತಿ ಮಾಡಿದ ಫಾರ್ಮ್‌ಗಳನ್ನು ಇನ್ನೂ ಬಿಎಲ್‌ಒಗಳಿಗೆ ನೀಡಿಲ್ಲ. ಮತ್ತಷ್ಟು ಜನರು ಇನ್ನೂ ಸಮಯವಿದೆ ಎಂದು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದರಿಂದ ಕೊನೆಯ ಕ್ಷಣದಲ್ಲಿ ಅನಗತ್ಯ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ, ಯಾವುದೇ ವಿಳಂಬ ಮಾಡದೆ ಎನ್ಯೂಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡಿ ಸಂಬಂಧಿತ ಬಿಎಲ್‌ಒಗಳಿಗೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ನಿಗದಿತ ಅವಧಿಯೊಳಗೆ ಎಲ್ಲ ಮತದಾರರು ಫಾರ್ಮ್‌ಗಳನ್ನು ಪೂರ್ಣಗೊಳಿಸಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಿಕ್ರಮ ಮುಧಾಳೆ, ನಿತಿನ್ ಕಪೂರ್, ಕೆ. ಸಿದ್ರಾಮೇಶ್ವರ ರೆಡ್ಡಿ, ಗಣೇಶ್, ಶ್ರೀಕಾಂತ್ ಓರಾದಕರ್, ಗುರುನಾಥ ಜ್ಯಾಂತಿಕರ್, ರವಿ ವಟಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.



