ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಪರಿಶಿಷ್ಟರು, ಹಿಂದುಳಿದ ವರ್ಗದವರ ಬೆಂಬಲ

ಕಲಬುರಗಿ, ಸೆ.26: ನಗರದ ನೂತನ ವಿದ್ಯಾಲಯದ ಮೈದಾನದಲ್ಲಿ ಸೆ.27ರಂದು ಸಂಜೆ 4 ಗಂಟೆಗೆ ನಡೆಯಲಿರುವ ಬಸವಾದಿ ಶರಣರ ಹಿಂದೂ ಮಹಾ ಸಮಾವೇಶಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮನ್ವಯ ಸಮಿತಿಯು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ಅಂಬಾರಾಯ ಅಷ್ಟಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಹಾಗೂ ಡಿಜಿಟಲ್ ಆಧುನಿಕರಣದ ಇಂದಿನ ಯುಗದಲ್ಲಿ ಮುಂದಿನ ಪೀಳಿಗೆಗೆ ಬಸವಾದಿ ಶರಣರ ಆಚಾರ-ವಿಚಾರ, ಸಂಸ್ಕೃತಿ, ಕಾಯಕ, ದಾಸೋಹ ಹಾಗೂ ಸಮಾನತೆಯಂತಹ ಮೌಲ್ಯಗಳ ಕುರಿತು ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಗಳ ನಡುವೆ ಸಾಮರಸ್ಯ ಬೆಳೆಸುವುದರ ಜೊತೆಗೆ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಉದ್ಯೋಗದ ಕುರಿತು ಜಾಗೃತಿ ಮೂಡಿಸುವಂತಹ ವೇದಿಕೆಗಳ ಅಗತ್ಯವಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ವೈಜ್ಞಾನಿಕ ಹಾಗೂ ಸಾವಯವ ಕೃಷಿ, ಬಸವಾದಿ ಶರಣರ ಆಚಾರ-ವಿಚಾರ-ಸಂಸ್ಕೃತಿ ಮತ್ತು ಹಿಂದೂ ಧರ್ಮದ ಐಕ್ಯತೆ ಕುರಿತು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಸುಮಾರು 250ಕ್ಕೂ ಹೆಚ್ಚು ವಿದ್ವಾಂಸರು, ಶರಣರು ಹಾಗೂ ಶರಣೆಯರು ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಉಪದೇಶ ಹಾಗೂ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಬಂಧುಗಳು, ಮಹಿಳೆಯರು, ರೈತರು ಹಾಗೂ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮಣ್ಣ ಇಟಗಾ, ಬಸವರಾಜ ಸಪ್ಪನಗೋಳ, ಈರಣ್ಣ ಹಡಪದ್, ದೇವೇಂದ್ರ ದೇಸಾಯಿ ಕಲ್ಲೂರು, ದಿಲೀಪ್ ಪಾಟೀಲ್, ರಾಜು ವಾಡೇಕರ್, ಗುರು ನರಿಬೋಳ, ಬಸವರಾಜ ಮದ್ದರಕಿ, ಅವ್ವಣ್ಣ ಮ್ಯಾಕೇರಿ, ಗಿರೀಶ್ ಭಜಂತ್ರಿ, ವಿಜಯಕುಮಾರ ಆಡಕಿ, ಮಲ್ಲಿಕಾರ್ಜುನ ಕುಸ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



