
ಕಲಬುರಗಿ, ಸೆ.1: ನಿಷ್ಕಲ್ಮಷ ಭಕ್ತಿ ಹಾಗೂ ದೃಢ ಸಂಕಲ್ಪವಿದ್ದರೆ ಮೃತ್ಯುವನ್ನೂ ಗೆಲ್ಲಬಹುದು ಎಂಬುದಕ್ಕೆ ಶಿವಭಕ್ತ ಮಾರ್ಕಂಡೇಯನ ಚರಿತ್ರೆಯೇ ಸಾಕ್ಷಿಯಾಗಿದೆ ಎಂದು ಡಾ. ಶಾಂತ ಸೋಮನಾಥ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ನಗರದ ಓಂನಗರದಲ್ಲಿರುವ ಮಾರ್ಕಂಡೇಯ ದೇವಸ್ಥಾನದಲ್ಲಿ ಜಿಲ್ಲಾ ಪದ್ಮಶಾಲಿ ಸಮಾಜದ ವತಿಯಿಂದ ಮಂಗಳವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಆಯೋಜಿಸಿದ್ದ ನೂಲ ಹುಣ್ಣಿಮೆ ಭವ್ಯ ಪೂಜಾ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಶಿವನು ಮಾರ್ಕಂಡೇಯನನ್ನು ರಕ್ಷಿಸಲು ಪ್ರಕಟವಾದ ರೂಪವೇ ‘ಮಾರ್ಕಂಡೇಶ್ವರ’ ಅಥವಾ ‘ಕಾಲಸಂಹಾರ ಮೂರ್ತಿ’. ಮಾರ್ಕಂಡೇಯನು ಜಪಿಸಿದ ಮಹಾಮೃತ್ಯುಂಜಯ ಮಂತ್ರವು ಇಂದಿಗೂ ಭಕ್ತರ ರೋಗ ಹಾಗೂ ಭಯವನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ವಿಶೇಷ ಪೂಜೆ ಹಾಗೂ ಧಾರ್ಮಿಕ ಜಾಗೃತಿ
ಮಹಾಪೂಜೆಯ ಅಂಗವಾಗಿ ಬೆಳಗ್ಗೆ 7 ಗಂಟೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು. ಬೆಳಗ್ಗೆ 9ರಿಂದ 11 ಗಂಟೆಯವರೆಗೆ ಭಕ್ತರಿಗೆ ಸನಾತನ ಹಿಂದೂ ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸಲಾಯಿತು.
ಕೈಮಗ್ಗ ನೇಕಾರರು ತಯಾರಿಸಿದ ಸ್ವದೇಶಿ ನೂಲನ್ನು ಸಂಘದ ಕುಟುಂಬದ ಕಾರ್ಯಕರ್ತರು ಭಕ್ತರಿಗೆ ವಿತರಿಸಿದರು. ಮಠದ ಭಕ್ತರು ಹಾಗೂ ಸಪ್ತ ನೇಕಾರ ಸಂಘದ ಕಾರ್ಯದರ್ಶಿ ಚಂದ್ರಶೇಖರ ಮಾಯಾಳಗಿ ಅವರು ಸಮಾಜ ಸೇವೆ ಮತ್ತಷ್ಟು ಮುಂದುವರಿಯಲಿ ಎಂದು ಆಶಿಸಿದರು.
ಸಮಾಜ ಸೇವೆ ಮಾಡಿದವರಿಗೆ ಸನ್ಮಾನ
ಪದ್ಮಶಾಲಿ ಸಮಾಜದ ಅಧ್ಯಕ್ಷ ನಾಗರಾಜ ಕುಸುಮಾ ಅವರ ಶ್ರಮಕ್ಕೆ ಗುರುಗಳ ಕರುಣೆ ಸದಾ ಇರಲಿ ಎಂದು ಶ್ರೀಗಳು ಹಾರೈಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇವಸ್ಥಾನದ ಪ್ರಮುಖ ಭಕ್ತರಾಗಿರುವ ಕರ್ನಾಟಕ ರಾಜ್ಯ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಔಷಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಸಂಗಾ ಅವರ ಕುಟುಂಬದವರನ್ನೂ ದೇವಸ್ಥಾನದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ವೇಳೆ ಜಿಲ್ಲೆಯ ನೇಕಾರರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿರುವುದು, ಕಲ್ಯಾಣ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ರಚಿಸುವುದು ಹಾಗೂ ಸಂವಿಧಾನದ ಅನುಚ್ಛೇದ 371(1) ತಿದ್ದುಪಡಿಗಾಗಿ ಹೋರಾಟ ನಡೆಸುತ್ತಿರುವ ನ್ಯಾಯವಾದಿ ವಿನೋದಕುಮಾರ್ ಜೇನವೇರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅವರ ಹೋರಾಟಕ್ಕೆ ಸದಾ ಬೆಂಬಲ ನೀಡುವುದಾಗಿ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಉಪಾಧ್ಯಕ್ಷ ವಿಜಯಕುಮಾರ್ ತ್ರಿವೇದಿ, ನ್ಯಾಯವಾದಿ ರಾಜಗೋಪಾಲ್ ಭಂಡಾರಿ, ತೊಗಟವೀರ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಬಲಪೂರ್, ಡಾ. ಬಸವರಾಜ ಚನ್ನಾ, ಕುರುಹಿನಶೆಟ್ಟಿ ಸಮಾಜದ ಉಪಾಧ್ಯಕ್ಷ ಕುಶಾಲ್ ಯಡವಳ್ಳಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.
ನೂಲ ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿವಿಧ ಭಕ್ತಿ ಸೇವೆಗಳನ್ನು ಸಲ್ಲಿಸಿ, ಮಾರ್ಕಂಡೇಯ ದೇವರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನೀತರಾದರು.



