ಧಾರ್ಮಿಕ

ದಂಡಗುಂಡದಲ್ಲಿ ನಾಳೆ ಅದ್ದೂರಿ ಬಸವಣ್ಣ ಮಹಾ ರಥೋತ್ಸವ

ಎರಡು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ; ಸಂಚಾರ, ಪಾರ್ಕಿಂಗ್, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳಿಗೆ ವ್ಯವಸ್ಥೆ

ಚಿತ್ತಾಪುರ, ಆ.29- ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಶ್ರೀ ಬಸವಣ್ಣ ಜಾತ್ರೆ ನಿಮಿತ್ತ ಆಗಸ್ಟ್ 31ರಂದು ಅದ್ದೂರಿಯಾಗಿ ಮಹಾ ರಥೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನ ಸಮಿತಿಯಿಂದ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ದಂಡಗುಂಡ ಬಸವಣ್ಣ ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ತಿಳಿಸಿದ್ದಾರೆ.

ದಂಡಗುಂಡ ಬಸವಣ್ಣ ದೇವಸ್ಥಾನದ ಯಾತ್ರಿ ನಿವಾಸದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸದ ಮಧ್ಯದ ಸೋಮವಾರ ಬಸವಣ್ಣನ ಜಾತ್ರೆ ನಡೆಯಲಿದ್ದು, ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಮಹಾರಥಕ್ಕೆ ವೈಭವದ ಅಲಂಕಾರ ಮಾಡಬೇಕು. ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ದಾಸೋಹ ವ್ಯವಸ್ಥೆ ಶುಚಿ ಮತ್ತು ರುಚಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಉತ್ಸವವನ್ನು ಸುಗಮವಾಗಿ ನಡೆಸಲು ಭಕ್ತರ ಸಹಕಾರವೂ ಅಗತ್ಯವಾಗಿದೆ ಎಂದು ಅವರು ಹೇಳಿದರು.

ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ತಾಲೂಕು ಆಡಳಿತದ ವತಿಯಿಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ವಿದ್ಯುತ್ ವ್ಯವಸ್ಥೆ, ತುರ್ತು ವೈದ್ಯಕೀಯ ಚಿಕಿತ್ಸೆ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಡಿವೈಎಸ್‌ಪಿ ಶಂಕರಗೌಡ ಪಾಟೀಲ ಮಾತನಾಡಿ, ದಂಡಗುಂಡ ಬಸವಣ್ಣನ ಜಾತ್ರೆ ಈ ಭಾಗದ ಪ್ರಮುಖ ಜಾತ್ರೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮುಖ್ಯವಾಗಿ ಸಂಚಾರ ಮತ್ತು ವಾಹನ ನಿಲುಗಡೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ದೇವಸ್ಥಾನಕ್ಕೆ ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸದಂತೆ ಸೂಚಿಸಲಾಗಿದೆ. ಗುರುತಿಸಿರುವ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ತಿಳಿಸಿದರು.

ಅಳ್ಳೊಳ್ಳಿ ಮಾರ್ಗದಿಂದ ದೇವಸ್ಥಾನಕ್ಕೆ ಬರುವ ವಾಹನಗಳಿಗೆ ಹಾಗೂ ಯಾಗಾಪುರ ಭಾಗದಿಂದ ಬರುವ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆಯ ಬಳಿಯ ಮೈದಾನದವರೆಗೆ ಮಾತ್ರ ಬಸ್‌ಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗುವುದು. ದೇವರ ದರ್ಶನಕ್ಕಾಗಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಎಲ್ಲರೂ ಸಹಕರಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ಮಾತನಾಡಿ, ಕಳೆದ ಅಮಾವಾಸ್ಯೆಯಂದು ದೇವಸ್ಥಾನಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜಾತ್ರೆಗೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಯಾವುದೇ ಸಮಸ್ಯೆ ಉಂಟಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿ ಉತ್ಸವ ನಡೆಸಬೇಕು. ಸುಗಮ ಜಾತ್ರೆಗೆ ಸೂಕ್ತ ಬಂದೋಬಸ್ತ್ ಅಗತ್ಯವಿದೆ ಎಂದರು.

ಟ್ರಸ್ಟ್ ಹಿರಿಯ ಸದಸ್ಯ ಭೀಮಣ್ಣ ಸಾಲಿ ಮಾತನಾಡಿ, ಜಾತ್ರೆಗೆ ವಿವಿಧ ಮಠಾಧೀಶರನ್ನು ಆಹ್ವಾನಿಸಲಾಗಿದ್ದು, ದೇವಸ್ಥಾನದಲ್ಲಿ ಕಲಶಾರೋಹಣ ಕಾರ್ಯಕ್ರಮ ನೆರವೇರಿಸಲಾಗುವುದು. ದಂಡಗುಂಡದಲ್ಲಿ ಹಿಂದಿನಿಂದಲೂ ಜಾತ್ರೆ ಶಾಂತಿಯುತವಾಗಿ ನಡೆಯುತ್ತಿದ್ದು, ಈ ಬಾರಿಯೂ ಗ್ರಾಮಸ್ಥರು ಮತ್ತು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ಜಾತ್ರೆ ನಡೆಸಲಾಗುವುದು. ಗ್ರಾಮದ ಭಕ್ತರು ದಾಸೋಹ ಸೇರಿದಂತೆ ವಿವಿಧ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಪಿಎಸ್‌ಐ ಮಂಜುನಾಥರೆಡ್ಡಿ ಮಾತನಾಡಿ, ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಪ್ರತ್ಯೇಕ ಮಾರ್ಗ ಗುರುತಿಸಲಾಗಿದೆ. ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಿಪಿಐ ಎಸ್.ಸಿ. ಪಾಟೀಲ, ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಸದಸ್ಯರಾದ ರಾಜಶೇಖರಗೌಡ ಸಂಕನೂರ, ಮಹಾಂತಗೌಡ ಮಾಲಿಪಾಟೀಲ ದಂಡಗುಂಡ, ಜಸ್ಕಾಂ ಇಲಾಖೆಯ ಜೆ.ಐ. ಆಂಜನೇಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಮಹೇಶ ರುಮಾಲ್ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button