ಜಿಲ್ಲಾಸುದ್ದಿ

ಅನಧಿಕೃತ ಚಿಕನ್, ಮಟನ್ ತ್ಯಾಜ್ಯ ಸಾಗಣೆ ವಿರೋಧಿಸಿ ಸೆ.28ರಂದು ಪಾಲಿಕೆ ಮುಂದೆ ಟೆಂಡರ್‌ದಾರನ ಸತ್ಯಾಗ್ರಹ

ಕಲಬುರಗಿ, ಸೆ.26: ನಗರದಲ್ಲಿ ಅನಧಿಕೃತವಾಗಿ ಮಟನ್ ಮತ್ತು ಚಿಕನ್ ತ್ಯಾಜ್ಯ ಸಂಗ್ರಹಿಸಿ ಸಾಗಿಸುವುದನ್ನು ತಡೆಯಬೇಕು ಎಂದು ಆಗ್ರಹಿಸಿ, ಚಿಕನ್ ಮತ್ತು ಮಟನ್ ತ್ಯಾಜ್ಯ ಸಂಗ್ರಹಣೆಯ ಟೆಂಡರ್‌ದಾರ ಎಂಎಸ್‌ಡಬ್ಲ್ಯುಎಂ ಎಂಟರ್‌ಪ್ರೈಸಸ್‌ನ ಮೊಹಮ್ಮದ್ ಆಶ್ರಫ್ ತಂದೆ ಮಹಮ್ಮದ್ ಅಬ್ದುಲ್ ಸತ್ತಾರ್ ಅವರು ಸೆ.28ರಂದು ಮಹಾನಗರ ಪಾಲಿಕೆ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯಿಂದ ಚಿಕನ್ ಹಾಗೂ ಮಟನ್ ತ್ಯಾಜ್ಯ ಸಂಗ್ರಹಿಸುವ ಗುತ್ತಿಗೆ ಪಡೆದು, ಕಾನೂನುಬದ್ಧವಾಗಿ ತ್ಯಾಜ್ಯ ಸಂಗ್ರಹಿಸುತ್ತಿದ್ದೇನೆ. ಆದರೆ ಎಪಿ-39/ವಿಐ 4987 ಹಾಗೂ ಕೆಎ-56 9390 ನೋಂದಣಿ ಸಂಖ್ಯೆಯ ವಾಹನಗಳಲ್ಲಿ ಅನಧಿಕೃತವಾಗಿ ಚಿಕನ್ ಮತ್ತು ಮಟನ್ ತ್ಯಾಜ್ಯ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿ, ಸಂಬಂಧಪಟ್ಟ ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಆದರೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಈವರೆಗೆ ಎಫ್‌ಐಆರ್ ದಾಖಲಿಸಿಲ್ಲ. ರಾಜಕೀಯ ಒತ್ತಡ ಹಾಗೂ ಲಂಚದ ವ್ಯಾಮೋಹಕ್ಕೆ ಒಳಗಾಗಿ ಜಪ್ತಿ ಮಾಡಿದ್ದ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಈ ಪ್ರಕರಣದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾಂಗ್ರೆಸ್‌ನ ಕೆಲ ಮುಖಂಡರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು, ಈ ಕುರಿತು ಪೊಲೀಸ್ ಆಯುಕ್ತರ ಬಳಿ ನ್ಯಾಯ ಕೇಳಲು ಹೋದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2023ರಿಂದ ಇದುವರೆಗೆ ಕಾನೂನುಬದ್ಧವಾಗಿ ಚಿಕನ್ ಮತ್ತು ಮಟನ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದೇನೆ. ಆದರೆ ನಗರದಲ್ಲಿ ಹೆಚ್ಚುತ್ತಿರುವ ಚಿಕನ್ ಮತ್ತು ಮಟನ್ ಅಂಗಡಿಗಳ ಪೈಕಿ ಕೆಲವು ಅಂಗಡಿಗಳಿಗೆ ಹೋಗಿ, ತಮ್ಮ ಬಳಿ ಟೆಂಡರ್ ಇದೆ ಎಂದು ಹೇಳಿಕೊಂಡು ಅನಧಿಕೃತವಾಗಿ ತ್ಯಾಜ್ಯ ಸಂಗ್ರಹಿಸಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ದುರ್ವಾಸನೆ ಹರಡಿ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗುತ್ತಿದೆ ಎಂದು ಅವರು ಆರೋಪಿಸಿದರು.

ಅನಧಿಕೃತವಾಗಿ ಚಿಕನ್ ಮತ್ತು ಮಟನ್ ತ್ಯಾಜ್ಯ ಸಾಗಿಸುವವರನ್ನು ಪ್ರಶ್ನಿಸಿದರೆ ವಾಹನ ಚಾಲಕರಿಗೆ ಚಾಕು ಹಾಗೂ ತಲವಾರು ತೋರಿಸಿ ಬೆದರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಇದರಿಂದಾಗಿ ಟೆಂಡರ್ ಪಡೆಯಲು ತಾವು ಪಾವತಿಸಿರುವ ₹12.69 ಲಕ್ಷ ಹಣ ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಅನಧಿಕೃತ ತ್ಯಾಜ್ಯ ಸಾಗಣೆಯಿಂದ ಟೆಂಡರ್‌ನಲ್ಲಿ ಹಣ ಪಾವತಿಸಿರುವ ತಮಗೆ ಯಾವುದೇ ಲಾಭವಾಗುತ್ತಿಲ್ಲ. ಮಟನ್ ಹಾಗೂ ಚಿಕನ್ ತ್ಯಾಜ್ಯ ವಿಲೇವಾರಿ ಮಾಡಲು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ವಾಹನಗಳನ್ನು ಖರೀದಿಸಿದ್ದು, ವಾಹನಗಳ ಸಾಲದ ಕಂತು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ವಾಹನಗಳನ್ನು ಜಪ್ತಿ ಮಾಡಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಮನೆ ಮತ್ತು ಸಂಬಂಧಿಕರ ಬಳಿಯಿರುವ ಚಿನ್ನಾಭರಣಗಳನ್ನು ಅಡವಿಟ್ಟು ವಾಹನಗಳ ಸಾಲದ ಕಂತುಗಳನ್ನು ಪಾವತಿಸುತ್ತಿರುವುದಾಗಿ ಅವರು ತಿಳಿಸಿದರು.

ಈ ಸಮಸ್ಯೆಯಿಂದ ತಾವು ಮಾನಸಿಕ ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಸಚಿವರಿಂದ ಹಿಡಿದು ಮುಖ್ಯಮಂತ್ರಿವರೆಗೆ ನ್ಯಾಯಕ್ಕಾಗಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಆದ್ದರಿಂದ ಸೆ.28ರಂದು ಮಹಾನಗರ ಪಾಲಿಕೆ ಕಚೇರಿ ಮುಂದೆ ನ್ಯಾಯ ದೊರೆಯುವವರೆಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದರು.

ತಮ್ಮ ಪ್ರತಿಭಟನೆಗೆ ಸ್ಪಂದಿಸದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button