18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ಬಂಧನ
2008ರ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ 67 ವರ್ಷದ ಆರೋಪಿ ಮುಂಬೈನ ಗೋರೆಗಾಂವ್‌ನಲ್ಲಿ ಖಾರ್ ಪೊಲೀಸರ ಬಲೆಗೆ

ಮುಂಬೈ, ಜು.10: 2008ರ ಕಳ್ಳತನ ಪ್ರಕರಣದಲ್ಲಿ ಕಳೆದ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ 67 ವರ್ಷದ ಆರೋಪಿಯನ್ನು ಮುಂಬೈನ ಖಾರ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮೊಹಮ್ಮದ್ ಕಾಮಿಲ್ ಅಲಿಯಾಸ್ ಕಲೀಮ್ ಅನ್ಸಾರಿ (67) ಎಂದು ಗುರುತಿಸಲಾಗಿದೆ. ಗೋರೆಗಾಂವ್ ಪೂರ್ವದ ಸಂತೋಷ್ ನಗರದಲ್ಲಿ ಆರೋಪಿ ಇರುವ ಕುರಿತು ತಾಂತ್ರಿಕ ಮಾಹಿತಿ ಪಡೆದ ಖಾರ್ ಪೊಲೀಸ್ ಠಾಣೆಯ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಪೊಲೀಸರ ಪ್ರಕಾರ, 2008ರಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 379 (ಕಳ್ಳತನ) ಹಾಗೂ 34ರ ಅಡಿಯಲ್ಲಿ ಅನ್ಸಾರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣವು ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ 9ನೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು.
ಆದರೆ, ವಿಚಾರಣೆಗೆ ಆರೋಪಿ ಪದೇಪದೇ ಗೈರುಹಾಜರಾಗುತ್ತಿದ್ದ ಹಿನ್ನೆಲೆ ನ್ಯಾಯಾಲಯವು 2022ರ ಮೇ 6ರಂದು ಅವರ ವಿರುದ್ಧ ಘೋಷಣಾ ಆದೇಶ (Proclamation Order) ಹೊರಡಿಸಿತ್ತು.
ಬೇಕಾಗಿದ್ದ ಹಾಗೂ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆ ಕಾರ್ಯಾಚರಣೆಯ ವೇಳೆ ಖಾರ್ ಪೊಲೀಸ್ ಠಾಣೆಯ ವಿಶೇಷ ನಿಗಾ ಮತ್ತು ಗಡೀಪಾರು ವಿಭಾಗದ ತಂಡಕ್ಕೆ ಆರೋಪಿ ಇರುವ ಬಗ್ಗೆ ತಾಂತ್ರಿಕ ಮಾಹಿತಿ ಲಭಿಸಿತು. ಅದರ ಆಧಾರದ ಮೇಲೆ ಗೋರೆಗಾಂವ್ ಪೂರ್ವದಲ್ಲಿ ಬಲೆ ಬೀಸಿ ಆರೋಪಿಯನ್ನು ಬಂಧಿಸಲಾಯಿತು.
ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಕಾಟೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಘ್, ಪೊಲೀಸ್ ಉಪನಿರೀಕ್ಷಕ ದಿನೇಶ್ ಪಾಟೀಲ್ ಹಾಗೂ ಗುರುವ್, ಪೋಫಳೆ, ಪವಾರ್, ಮಾನೆ ಮತ್ತು ಥೋಂಬ್ರೆ ಸೇರಿದಂತೆ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ.



