ಧಾರ್ಮಿಕಸಮಾಜ

ಸಮಾಜದ ಅಭಿವೃದ್ಧಿಗೆ ಕ್ರೈಸ್ತ ಮಿಷನರಿಗಳ ಸೇವೆ ಅಮೂಲ್ಯ: ರೆವರೆಂಡ್ ಡಿಸೋಜ್ ಥಾಮಸ್

ಬೀದರ್‌ನಲ್ಲಿ ನಡೆದ ಸಾಹಿತ್ಯ ಸಂಘದ ವಾರ್ಷಿಕೋತ್ಸವದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಯಲ್ಲಿ ಮಿಷನರಿಗಳ ಕೊಡುಗೆಯನ್ನು ಸ್ಮರಿಸಿದ ಗಣ್ಯರು.

ಬೀದರ್, ಜು.25: ಸಮಾಜದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಕ್ರೈಸ್ತ ಮಿಷನರಿಗಳು ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ಅವರ ತ್ಯಾಗ ಮತ್ತು ಸಮರ್ಪಣೆಯನ್ನು ಸದಾ ಸ್ಮರಿಸಬೇಕು ಎಂದು ಸೆಂಟ್ ಪಾಲ್ ಮೆಥೋಡಿಸ್ಟ್ ಕೇಂದ್ರ ಸಭೆ (ಉತ್ತರ) ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಡಿಸೋಜ್ ಥಾಮಸ್ ಹೇಳಿದರು.

ನಗರದ ಮಂಗಲಪೇಟೆಯ ರೆವರೆಂಡ್ ಎಂ.ಡಿ. ರಾಸ್ ಮೆಮೋರಿಯಲ್ ಚರ್ಚ್‌ನಲ್ಲಿ ಗುರುವಾರ ನಡೆದ ರೆವರೆಂಡ್ ಜೆ.ಟಿ. ಸಿಮಂಡ್ಸ್ ಕನ್ನಡ ಸಾಹಿತ್ಯ ಸಂಘದ ನಾಲ್ಕನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಇಂದಿನ ಸಮಾಜದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಮಿಷನರಿಗಳ ಕೊಡುಗೆ ಅಪಾರವಾಗಿದೆ. ಸಮಾಜದ ಉನ್ನತಿಗಾಗಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವುದನ್ನು ಮರೆಯಬಾರದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಘೋಡಂಪಳ್ಳಿ ಸರ್ಕಾರಿ ಪ್ರಥಮ ದರ್ಜೆ ವಸತಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ದೇವಿದಾಸ್ ತುಮಕುಂಟೆ ಮಾತನಾಡಿ, ಮಿಷನರಿಗಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಿಷನರಿಗಳ ಸೇವೆಯ ಕುರಿತು ವಿಶೇಷ ಉಪನ್ಯಾಸ ನೀಡಿದ ಜೈಕರ್ ರತ್ನಪ್ಪ ಅವರು, 1908ರಲ್ಲಿ ಇಬ್ಬರು ಮಹಿಳಾ ಕ್ರೈಸ್ತ ಮಿಷನರಿಗಳು ಬೀದರ್‌ನಲ್ಲಿ ಮೊದಲ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿದ್ದು, ಆ ಶಿಕ್ಷಣ ಸಂಸ್ಥೆ ಇಂದಿಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

1903ರಲ್ಲಿಯೇ ಬೀದರ್‌ನಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಆರಂಭಿಸಿದ ಕ್ರೈಸ್ತ ಮಿಷನರಿಗಳು, ಜನಸಾಮಾನ್ಯರಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಾಜದ ಆರೋಗ್ಯ ಕ್ಷೇತ್ರದಲ್ಲೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಕೆ. ಸುಂದರ ರಾಜ್ ಮಾತನಾಡಿ, ಕ್ರೈಸ್ತ ಮಿಷನರಿಗಳು ದೀನ-ದಲಿತರು, ಬಡವರು, ನಿರ್ಗತಿಕರು ಹಾಗೂ ಸಮಾಜದ ಅಂಚಿನಲ್ಲಿರುವ ಜನರ ಏಳಿಗೆಗಾಗಿ ನಿರಂತರ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೆಂಟ್ ಪಾಲ್ ಮೆಥೋಡಿಸ್ಟ್ ಕೇಂದ್ರ ಸಭೆ (ಉತ್ತರ) ಸಭಾ ಪಾಲಕ ರೆವರೆಂಡ್ ಎಸ್.ಎಲ್. ತುಕಾರಾಮ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಟಿ.ಜೆ. ಹಾದಿಮನಿ ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ತುಡವೆ ಧನರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಟಿ.ಎಂ. ಮಚ್ಚೆ ಸ್ವಾಗತಿಸಿದರು. ಉಪಾಧ್ಯಕ್ಷ ಶಿರೋಮಣಿ ಡಾಕುಳಗಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕ ಕಂಟೆಪ್ಪ ವಂದಿಸಿದರು.

ಕಾರ್ಯಕ್ರಮದಲ್ಲಿ ರೆವರೆಂಡ್ ಧೂಳಪ್ಪ, ರೆವರೆಂಡ್ ಸೈಮನ್ ಮಾರ್ಕ್, ಶಂಭುಲಿಂಗ ವಾಲೋಡ್ಡಿ, ಬಸವರಾಜ ಮಯೂರ್, ಗುರುನಾಥ ಅಕ್ಕಣ್ಣ, ಡಾ. ಬಸವರಾಜ ಬಳ್ಳೂರ, ವಿದ್ಯಾವತಿ ಬಳ್ಳೂರ, ಶಾಂತಮ್ಮ ಬಳ್ಳೂರ, ಡಾ. ರಾಮಚಂದ್ರ ಗಣಾಪುರ, ಡಾ. ಈಶ್ವರಯ್ಯ ಕೊಡಂಬಲ್, ಜಗನ್ನಾಥ ಕಮಲಾಪುರ, ದೇವೇಂದ್ರ ಕರಂಜೆ, ಸುನೀಲ್ ಮಾಳಗೆ, ಸುಭಾಷ್ ರತ್ನ, ಭೀಮಣ್ಣ ಅಷ್ಟೂರೆ, ಮಾರುತಿ ಮಿತ್ರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button