ಸಮಾಜ

ವಿಶ್ವ ಆದಿವಾಸಿ ದಿನಾಚರಣೆ: ಬೀದರ್‌ನಲ್ಲಿ ಟ್ರೈಬಲ್ ಮ್ಯೂಸಿಯಂ ನಿರ್ಮಾಣಕ್ಕೆ ಆಗ್ರಹ

ಆದಿವಾಸಿ ಸಮುದಾಯಗಳ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಪರಿಚಯಿಸಲು ಮ್ಯೂಸಿಯಂ ಅಗತ್ಯ: ವಿಜಯಕುಮಾರ್ ಡುಮ್ಮೆ

ಬೀದರ್, ಆ.9: ಜಿಲ್ಲೆಯಲ್ಲಿರುವ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯಗಳ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಬೀದರ್‌ನಲ್ಲಿ ಟ್ರೈಬಲ್ ಮ್ಯೂಸಿಯಂ ನಿರ್ಮಿಸಬೇಕು ಎಂದು ಜಿಲ್ಲಾ ಆದಿವಾಸಿ ರಕ್ಷಣಾ ಪರಿಷತ್ತು ಹಾಗೂ ಜಿಲ್ಲಾ ಆದಿವಾಸಿ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಜಯಕುಮಾರ್ ಡುಮ್ಮೆ ಅವರು ಒತ್ತಾಯಿಸಿದರು.

ನಗರದ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಕ್ಷಿಣ ಭಾರತದ ಟ್ರೈಬಲ್ ಐಕಾನ್ ಮಹಾತ್ಮ ಬೊಮ್ಮಗೊಂಡರು ಜಿಲ್ಲೆಯ ನೆಲದಲ್ಲಿ ಜನಿಸಿರುವುದು ಹೆಮ್ಮೆಯ ಸಂಗತಿ. ಅವರ ಜನ್ಮಸ್ಥಳ ಚಿದ್ರಿಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣಕ್ಕೆ ಬೊಮ್ಮಗೊಂಡರ ಹೆಸರಿಡಬೇಕು. ಬೀದರ್ ಕೋಟೆಯಲ್ಲಿರುವ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ಅವರ ಹೆಸರಿನ ಕೆರೆಯನ್ನೂ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ಗೋಂಡ್, ಕೋಲ್, ಮುಂಡಾ, ಭಿಲ್, ಸಂತಾಲ್ ಸೇರಿದಂತೆ ದೇಶದ ವಿವಿಧ ಬುಡಕಟ್ಟು ಸಮುದಾಯಗಳ ಇತಿಹಾಸವನ್ನು ಸ್ಮರಿಸದೆ ಭಾರತದ ಆದಿವಾಸಿ ಇತಿಹಾಸ ಪೂರ್ಣವಾಗುವುದಿಲ್ಲ. ಈ ಸಮುದಾಯಗಳ ಇತಿಹಾಸ, ಸಂಸ್ಕೃತಿ, ಜೀವನ ಪದ್ಧತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮ್ಯೂಸಿಯಂ ನಿರ್ಮಾಣ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ಸಾಹಿತಿ ಮಾಣಿಕ ನೇಲಗಿ ಮಾತನಾಡಿ, ಬುಡಕಟ್ಟು ಸಮುದಾಯಗಳು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾದಾಗ ಮಾತ್ರ ಆದಿವಾಸಿಗಳ ಸಮಗ್ರ ಅಭಿವೃದ್ಧಿ ಸಾಧ್ಯ. ಆದ್ದರಿಂದ ಸಮುದಾಯದ ಯುವಜನರು ಉನ್ನತ ಶಿಕ್ಷಣ ಪಡೆಯುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಕರೆ ನೀಡಿದರು.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಹಾಗೂ ಸಮಾಜ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಶಿಕ್ಷಣ, ಉದ್ಯೋಗ, ಮೂಲಸೌಕರ್ಯ ಹಾಗೂ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ನೀಡುವ ಮೂಲಕ ಆದಿವಾಸಿ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗೋಂಡ್ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ಚಿಮಕೋಡ್, ಜಿಲ್ಲಾ ಟೋಕರೇ ಕೋಳಿ ಸಮಾಜದ ಉಪಾಧ್ಯಕ್ಷ ಸುನೀಲ್ ಕಾಶಂಪುರ, ರವಿ ಧೋಣೆ, ಪ್ರಭು ಮೇತ್ರೆ, ಸಂಗೊಳ್ಳಿ ರಾಯಣ್ಣ ಯುವಘರ್ಜನೆ ಪ್ರಧಾನ ಕಾರ್ಯದರ್ಶಿ ಕುಮಾರ್ ಹಜ್ಜರಗಿ, ಆದಿವಾಸಿ ಸಮುದಾಯದ ಮುಖಂಡರಾದ ರಮೇಶ್ ಬಾಲೆಬಾಯಿ, ವಿವೇಕ್ ರಾಜಗೊಂಡ, ಮಹೇಶ್ ಮೇಧಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button