
ಮೂಡಲಗಿ, ನ. ೩: “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಇಳಿ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿ” ಎಂದು ನಿವೃತ್ತ ಶಿಕ್ಷಕರಾದ ಬಿ.ಎಂ. ಪರಗುಣಿ ಮತ್ತು ಎಸ್.ಸಿ. ಗಾಣಿಗೇರ್ ಅವರು ತಮ್ಮ ೪೨ ವರ್ಷಗಳ ಹಿಂದಿನ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಯಾದವಾಡ ಗ್ರಾಮದ ಶ್ರೀ ಗುರುನೀಲಕಂಠ ಸ್ವಾಮಿ ಪ್ರೌಢಶಾಲೆಯಲ್ಲಿ ೧೯೮೩–೮೪ನೇ ಸಾಲಿನ ವಿದ್ಯಾರ್ಥಿಗಳು ೪೨ ವರ್ಷಗಳ ಬಳಿಕ ಆಯೋಜಿಸಿದ್ದ ಗುರುನಮನ ಕಾರ್ಯಕ್ರಮದಲ್ಲಿ ಶಿಕ್ಷಕರು ಹಳೆಯ ದಿನಗಳನ್ನು ಮೆಲುಕು ಹಾಕುವುದರ ಜತೆಗೆ ಆರೋಗ್ಯ, ಕುಟುಂಬ ಮತ್ತು ಜೀವನಮೌಲ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
ಹೃದಯದ ಆರೋಗ್ಯದ ಬಗ್ಗೆ ಜಾಗೃತಿ:
ವಿದ್ಯಾರ್ಥಿಗಳಿಗೆ ಪಾಠ ಬೋಧಿಸಿದ ನಿವೃತ್ತ ಶಿಕ್ಷಕ ಬಿ.ಎಂ. ಪರಗುಣಿ ಅವರು ಹೃದಯದ ಚಿತ್ರ ಬಿಡಿಸಿ ಅದರ ಕಾರ್ಯವೈಖರಿ ಹಾಗೂ ಮಹತ್ವವನ್ನು ವಿವರಿಸಿದರು. ಹೃದಯವು ಮಾನವನ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಅತಿಯಾದ ಒತ್ತಡ, ಚಿಂತೆ, ನಿರಾಸೆ, ಅಸಮಾಧಾನ, ಅತಿಯಾದ ಸಂತೋಷ ಅಥವಾ ದುಃಖವು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅಪೌಷ್ಟಿಕ ಆಹಾರ ಸೇವನೆಯೂ ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ತಿಳಿಸಿದರು.
ಪ್ರಸ್ತುತ ನಿಮ್ಮ ವಯಸ್ಸು ಸುಮಾರು ೫೯ ವರ್ಷಗಳಾಗಿದ್ದು, ಇಳಿ ವಯಸ್ಸಿನಲ್ಲಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕಿ ಗಿರಿಜಾ ತಾಂವಶಿ ಅವರು ಹೃದಯದ ಚಟುವಟಿಕೆಗಳನ್ನು ಪರೀಕ್ಷಿಸುವ ವಿಧಾನ ಕುರಿತು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪರಗುಣಿ ಅವರು, ವಿದ್ಯುತ್ ಚಟುವಟಿಕೆಯ ಮೂಲಕ ಹೃದಯದ ಕಾರ್ಯವೈಖರಿಯನ್ನು ಪರೀಕ್ಷಿಸಬಹುದು ಎಂದು ವಿವರಿಸಿದರು.
ಕುಟುಂಬದಲ್ಲಿ ಹೊಂದಾಣಿಕೆ ಇರಲಿ:
ನಿವೃತ್ತ ಸಮಾಜಶಾಸ್ತ್ರ ಶಿಕ್ಷಕ ಎಸ್.ಸಿ. ಗಾಣಿಗೇರ್ ಮಾತನಾಡಿ, ಹಿಂದೆ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಎಲ್ಲರೂ ಒಟ್ಟಾಗಿ ಬದುಕುತ್ತಿದ್ದರು. ಕುಟುಂಬದ ಸಮಸ್ಯೆಗಳಿಗೆ ಒಟ್ಟಾಗಿ ಪರಿಹಾರ ಕಂಡುಕೊಳ್ಳುವ ವಾತಾವರಣವಿತ್ತು. ಆದರೆ ಈಗ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗಿದ್ದು, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಕುಟುಂಬ ಸದಸ್ಯರು ಪರಸ್ಪರ ಭೇಟಿಯಾಗುವುದೂ ಕಡಿಮೆಯಾಗಿದೆ ಎಂದರು.
ಇಳಿ ವಯಸ್ಸಿನಲ್ಲಿ ತಂದೆ-ತಾಯಂದಿರು ಮತ್ತು ಮಕ್ಕಳ ನಡುವೆ ಉತ್ತಮ ಬಾಂಧವ್ಯ ಹಾಗೂ ಹೊಂದಾಣಿಕೆ ಇರಬೇಕು. ವಯಸ್ಸಾದಂತೆ ಪರಸ್ಪರ ಸಹಕಾರ, ಪ್ರೀತಿ ಮತ್ತು ತಾಳ್ಮೆಯಿಂದ ಜೀವನ ಸಾಗಿಸುವುದು ಮುಖ್ಯ ಎಂದು ಸಲಹೆ ನೀಡಿದರು.
ಭಾರತವು ಏಕ ಸಂಸ್ಕೃತಿಯ ದೇಶವಲ್ಲ; ಬಹುಸಂಸ್ಕೃತಿಗಳ ನೆಲೆಯಾಗಿದೆ. ಸಹಬಾಳ್ವೆ ಮತ್ತು ಸಾಮರಸ್ಯವೇ ಭಾರತದ ವೈಶಿಷ್ಟ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬರು ಶಿಕ್ಷಕರಿಗೆ ಸಣ್ಣ ಬೆತ್ತವೊಂದನ್ನು ನೀಡಿ, ತಪ್ಪು ಮಾಡಿದರೆ ದಂಡಿಸುವಂತೆ ವಿನಂತಿಸಿದರು. ಅದಕ್ಕೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ ಗಾಣಿಗೇರ್ ಅವರು, “ನಾನು ೪೨ ವರ್ಷಗಳ ಹಿಂದೆಯೇ ಬೆತ್ತ ಹಿಡಿಯುವುದನ್ನು ಬಿಟ್ಟಿದ್ದೇನೆ. ಈಗ ಅದರ ಅಗತ್ಯವಿಲ್ಲ” ಎಂದು ಬೆತ್ತವನ್ನು ಕೆಳಗಿಟ್ಟರು. ಈ ಪ್ರಸಂಗ ವಿದ್ಯಾರ್ಥಿಗಳಲ್ಲಿ ನಗೆ ಮೂಡಿಸಿತು.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಶಾಲೆಯ ಸಣ್ಣ ಕೊಠಡಿ ಸಾಲದೆ ಹಲವರು ನಿಂತುಕೊಂಡೇ ಶಿಕ್ಷಕರ ಪಾಠ ಆಲಿಸಿದರು. ಬಳಿಕ ಶಾಲೆಯ ಆವರಣದಲ್ಲಿ ಎಲ್ಲರೂ ಸಾಮೂಹಿಕ ಛಾಯಾಚಿತ್ರ ತೆಗೆಸಿಕೊಂಡು ಸಂಭ್ರಮಿಸಿದರು.
ನೃತ್ಯ, ಸಕ್ಕಾಸರಗಿಯಿಂದ ಸಂಭ್ರಮ:
ಕಾರ್ಯಕ್ರಮದ ಆರಂಭದಲ್ಲಿ ಕೊಪದಟ್ಟಿ ಬಳಿಯ ಮುಧೋಳ ರಸ್ತೆಯಲ್ಲಿರುವ ಹುಬ್ಬಳ್ಳಿ ಮುತ್ಯಾ ಮಠದಿಂದ ಚನ್ನಬಸಪ್ಪ ಮುತ್ಯಾ ಅವರ ದಿವ್ಯ ಸಾನ್ನಿಧ್ಯದಲ್ಲಿ ಕರಡಿಮಜಲಿನೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಆಗಮಿಸಿದರು. ಕೊಪದಟ್ಟಿ ಮಾರ್ಗವಾಗಿ ಹಳ್ಳದ ಚಿಕ್ಕ ಸೇತುವೆ ದಾಟಿ ಪೇಟೆಯ ಮೂಲಕ ಗ್ರಾಮದ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನದ ಎದುರು ಸೇರಿದರು.
ಅಲ್ಲಿ ನಿವೃತ್ತ ಶಿಕ್ಷಕರಾದ ಬಿ.ಎಂ. ಪರಗುಣಿ, ಎಸ್.ಸಿ. ಗಾಣಿಗೇರ್ ಹಾಗೂ ನಿವೃತ್ತ ಜವಾನ ಬಸಲಿಂಗಪ್ಪ ಕಾಗವಾಡ ಅವರೊಂದಿಗೆ ವಿದ್ಯಾರ್ಥಿಗಳು ಸಾಮೂಹಿಕ ಛಾಯಾಚಿತ್ರ ತೆಗೆಸಿಕೊಂಡರು. ಬಳಿಕ ಶಿಕ್ಷಕರನ್ನು ಕಾರಿನಲ್ಲಿ ಗುರುನೀಲಕಂಠ ಸ್ವಾಮಿ ಪ್ರೌಢಶಾಲೆಗೆ ಕರೆತರಲಾಯಿತು.
ದೇವಸ್ಥಾನದ ಎದುರು ಪತ್ರಕರ್ತರಾದ ಬಸವರಾಜ ಅ. ಚಿನಿವಾರ್, ವಿಶ್ವನಾಥ ಶಂ. ಮುನವಳ್ಳಿ ಮತ್ತು ವಿಷ್ಣು ಕಲಾಲ್ ಅವರು ಕರಡಿಮಜಲಿನ ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಶಾಲೆಯ ಆವರಣದಲ್ಲಿ ಉಪನ್ಯಾಸಕಿ ಗಿರಿಜಾ ತಾಂವಶಿ ಹಾಗೂ ಶಿಕ್ಷಕಿ, ಕವಯಿತ್ರಿ ಗೋದಾವರಿ ಅ. ದೇಶಪಾಂಡೆ ಅವರು ಸಕ್ಕಾಸರಗಿ ಆಡುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
೪೨ ವರ್ಷಗಳ ಬಳಿಕ ಗುರುಗಳು ಮತ್ತು ವಿದ್ಯಾರ್ಥಿಗಳು ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಹಂಚಿಕೊಂಡ ಈ ಗುರುನಮನ ಕಾರ್ಯಕ್ರಮ ಯಾದವಾಡ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿಸಿತು.



