ಜಿಲ್ಲಾಸುದ್ದಿ

ಮಕ್ಕಳ ಕಣ್ಣುಗಳಲ್ಲಿ ಭಾರತದ ಭವಿಷ್ಯ ಕಂಡಿದ್ದ ನೆಹರು: ಡಾ. ಶರಣಬಸವ ವಾಲಿಕಾರ್

ಅಫಜಲಪುರ, ನ.14: ಭಾರತದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಭಾರತದ ಭವಿಷ್ಯವನ್ನು ಶಾಲೆಗಳ ತರಗತಿ ಕೋಣೆಗಳಲ್ಲಿರುವ ಮಕ್ಕಳ ಕಣ್ಣುಗಳಲ್ಲಿ ಕಂಡಿದ್ದರು. ಮಕ್ಕಳ ಮೇಲೆ ಅವರಿಗೆ ಅಪಾರ ಭರವಸೆ ಮತ್ತು ಪ್ರೀತಿ ಇತ್ತು ಎಂದು ಡಾ. ಶರಣಬಸವ ವಾಲಿಕಾರ್ ಹೇಳಿದರು.

ಪಟ್ಟಣದ ದೇವರಾಜ ಅರಸು ಕಿರಿಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೆಹರು ಅವರು ತಮ್ಮ ಬರಹವೊಂದರಲ್ಲಿ, “ನಾನು ಭಾರತದ ಭವಿಷ್ಯವನ್ನು ಭಾರತದ ಶಾಲೆಗಳ ತರಗತಿ ಕೋಣೆಗಳಲ್ಲಿನ ಮಕ್ಕಳ ಕಣ್ಣುಗಳಲ್ಲಿ ನೋಡುತ್ತೇನೆ” ಎಂದು ಹೇಳಿದ್ದರು. ಅವರು ದೀರ್ಘಕಾಲ ದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿ, ಭಾರತವನ್ನು ಜಗತ್ತಿನ ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ಶ್ರಮಿಸಿದ್ದರು. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಮತ್ತು ಗೌರವ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಿ.ಎಂ. ನದಾಫ್ ಮಾತನಾಡಿದರು. ಆರಂಭದಲ್ಲಿ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಜಕಪ್ಪಾ ಪೂಜಾರಿ, ಹರ್ಷಾ ಮ್ಯಾಕೇರಿ, ಭಾಗ್ಯಶ್ರೀ ನಂದಿಕೋಲ್, ಐಶ್ವರ್ಯ ಪೂಜಾರಿ, ಸೃಷ್ಟಿ ನಂದಿಕೋಲು ಹಾಗೂ ಸುನಂದಾ ಬಡದಾಳ ಅವರನ್ನು ಸನ್ಮಾನಿಸಲಾಯಿತು.

ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸೌಮ್ಯ ರಾಚೋಟಿ, ರೇಣುಕಾ ವಾಲೀಕಾರ, ಭಾಗ್ಯಶ್ರೀ ಹೇರೂರು ಮತ್ತು ವೀಣಾ ಸುಂಕನೂರ ಉಪಸ್ಥಿತರಿದ್ದರು. ಶಿವಲೀಲಾ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು. ಸೌಮ್ಯ ರಾಚೋಟಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button