ಜಿಲ್ಲಾಸುದ್ದಿ

ಡಿ. ಮಹಾಲಿಂಗಪ್ಪ ಈಶ್ವರ ಕತ್ತಿ ಸರ್ ಪುಣ್ಯಸ್ಮರಣೆ: ಯಾದವಾಡದಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಮೂಡಲಗಿ, ನ.14: ರಕ್ತದಾನದ ಮೂಲಕ ಆಸ್ಟ್ರೇಲಿಯಾದ ಜೇಮ್ಸ್ ಹ್ಯಾರಿಸನ್ ಅವರು ಸುಮಾರು 24 ಲಕ್ಷ ಶಿಶುಗಳ ಜೀವ ಉಳಿಸಲು ಕಾರಣರಾಗಿದ್ದಾರೆ ಎಂದು ಗೋಕಾಕದ ರೋಟರಿ ರಕ್ತಭಂಡಾರದ ಕಾರ್ಯದರ್ಶಿ ಹಾಗೂ ಎಲೆಕ್ಟ್ರಾನಿಕ್ ಎಂಜಿನಿಯರ್ ಸೋಮಶೇಖರ ಬಸವರಾಜ ಮಗದುಮ್ಮ ಹೇಳಿದರು.

ತಾಲೂಕಿನ ಯಾದವಾಡ ಗ್ರಾಮದ ಜೇಸೀಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಡಿ. ಮಹಾಲಿಂಗಪ್ಪ ಈಶ್ವರ ಕತ್ತಿ ಸರ್ ಅವರ ಎಂಟನೇ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ್ದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೇಮ್ಸ್ ಹ್ಯಾರಿಸನ್ ಅವರು ಸಾಮಾನ್ಯರಲ್ಲದ ಅಸಾಮಾನ್ಯ ವ್ಯಕ್ತಿಯಾಗಿದ್ದರು. ಅನೇಕ ಶಿಶುಗಳು ಹಾಗೂ ಅವರ ಕುಟುಂಬಗಳ ಪಾಲಿಗೆ ರಕ್ತದಾನದ ಮೂಲಕ ದೇವರಂತಾಗಿದ್ದರು. ಅವರು ನಿಧನರಾದಾಗ ಆಸ್ಟ್ರೇಲಿಯಾ ಮಾತ್ರವಲ್ಲದೆ ಜಗತ್ತಿನ ಹಲವು ದೇಶಗಳ ಲಕ್ಷಾಂತರ ಮನೆಗಳಲ್ಲಿ ಅವರ ಸ್ಮರಣಾರ್ಥ ಮೇಣದಬತ್ತಿಗಳನ್ನು ಬೆಳಗಿಸಲಾಗಿತ್ತು. ಅವರ ಸೇವೆಯಿಂದ ರಕ್ತದಾನಿಗಳು ಸ್ಫೂರ್ತಿ ಪಡೆಯಬೇಕು ಎಂದು ಕರೆ ನೀಡಿದರು.

ಡಿ. ಮಹಾಲಿಂಗಪ್ಪ ಈಶ್ವರ ಕತ್ತಿ ಅವರ ಸ್ಮರಣಾರ್ಥ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಕತ್ತಿ ಕುಟುಂಬವು ದೇಹದಾನದಲ್ಲಿಯೂ ಇಡೀ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. ಒಂದೇ ಕುಟುಂಬದ ಮಹಾಲಿಂಗಪ್ಪ ಕತ್ತಿ, ಅವರ ಧರ್ಮಪತ್ನಿ ಪಾರ್ವತಿ ಎಂ. ಕತ್ತಿ ಹಾಗೂ ಸಹೋದರ ಬಸಲಿಂಗಪ್ಪ ಕತ್ತಿ ಅವರು ದೇಹದಾನ ಮಾಡಿದ್ದಾರೆ. ಜೇಸೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಈಶ್ವರ ಎಂ. ಕತ್ತಿ ಅವರು ಈಗಾಗಲೇ ಮೂರು ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು, ಇದು ನಾಲ್ಕನೇ ಶಿಬಿರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ತದಾನದ ಮಹತ್ವ

ರಕ್ತದಾನ, ದೇಹದಾನ ಹಾಗೂ ನೇತ್ರದಾನದ ಕುರಿತು ಜನರಲ್ಲಿ ಜಾಗೃತಿ ಹೆಚ್ಚುತ್ತಿದೆ. ಸಂಸ್ಥೆಯ ವತಿಯಿಂದ ಗೋಕಾಕ ಮತ್ತು ಹುಕ್ಕೇರಿ ತಾಲೂಕುಗಳಲ್ಲಿಯೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಅನೇಕ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿ ವರ್ಷ 2,000ಕ್ಕೂ ಹೆಚ್ಚು ಜನರು ರಕ್ತದಾನ ಮಾಡುತ್ತಿದ್ದಾರೆ. ಈ ವರ್ಷ ಸುಮಾರು 2,500 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ನವೆಂಬರ್ 20ರಂದು ಗೋಕಾಕದಲ್ಲಿ ಶಂಕರಲಿಂಗ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ರಾಜ್ಯಮಟ್ಟದ ಕರೆಯ ಮೇರೆಗೆ ನವೆಂಬರ್ 25ರಂದು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ, ರಸ್ತೆ ಅಪಘಾತದಲ್ಲಿ ತೀವ್ರ ರಕ್ತಸ್ರಾವವಾದಾಗ, ಆಕಸ್ಮಿಕವಾಗಿ ಸುಟ್ಟ ಗಾಯಗಳಾದಾಗ, ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವ ಉಂಟಾದಾಗ ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಲ್ಲಿ ರಕ್ತದ ಅಂಶ ಕಡಿಮೆಯಾದಾಗ ಶುದ್ಧ ರಕ್ತದ ಅಗತ್ಯವಿರುತ್ತದೆ. ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾದ ಸಂದರ್ಭದಲ್ಲಿಯೂ ರಕ್ತದ ಅವಶ್ಯಕತೆ ಇರುತ್ತದೆ. ಸಕಾಲದಲ್ಲಿ ರಕ್ತ ದೊರೆಯದಿದ್ದರೆ ರೋಗಿಯ ಜೀವಕ್ಕೆ ಅಪಾಯ ಉಂಟಾಗಬಹುದು ಎಂದು ಎಚ್ಚರಿಸಿದರು.

ಯಾರು ರಕ್ತದಾನ ಮಾಡಬಹುದು?

18 ವರ್ಷ ಮೇಲ್ಪಟ್ಟು 65 ವರ್ಷದೊಳಗಿನವರು ರಕ್ತದಾನ ಮಾಡಬಹುದು. ಕನಿಷ್ಠ 45 ಕೆ.ಜಿ. ತೂಕ ಹೊಂದಿರಬೇಕು. ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ 12.5 ಗ್ರಾಂ ಅಥವಾ ಅದಕ್ಕಿಂತ ಹೆಚ್ಚಿರಬೇಕು. ಪುರುಷರು ಮತ್ತು ಮಹಿಳೆಯರು ಸಾಮಾನ್ಯವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಯೂನಿಟ್ ರಕ್ತದಾನ ಮಾಡಬಹುದು ಎಂದು ತಿಳಿಸಿದರು.

ರಕ್ತದಾನ ಮಾಡಿದ 24 ಗಂಟೆಗಳೊಳಗೆ ದೇಹದಲ್ಲಿನ ರಕ್ತದ ಪ್ರಮಾಣ ಸಹಜ ಸ್ಥಿತಿಗೆ ಮರಳುತ್ತದೆ. ರಕ್ತದಾನ ಮಾಡಿದವರಿಗೆ ವಿಶೇಷ ಆಹಾರ, ಔಷಧ ಅಥವಾ ವಿಶ್ರಾಂತಿಯ ಅಗತ್ಯವಿಲ್ಲ. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಹೃದಯಾಘಾತದ ಸಾಧ್ಯತೆಯನ್ನು 10 ವರ್ಷಗಳವರೆಗೆ ಮುಂದೂಡಲು ಸಹಕಾರಿಯಾಗಬಹುದು. ಹೀಗಾಗಿ ರಕ್ತದಾನ ಮಾಡುವುದರ ಮೂಲಕ ಮತ್ತೊಬ್ಬರ ಜೀವ ಉಳಿಸುವುದರ ಜೊತೆಗೆ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

54 ಯೂನಿಟ್ ರಕ್ತ ಸಂಗ್ರಹ

ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಒಟ್ಟು 54 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಬಸವರಾಜ ಹಿದಕಲ್, ಶ್ರೀಶೈಲ ಧವಳೇಶ್ವರ, ಹಣಮಂತ ಮೋಡಿ, ಮಾಳಪ್ಪ ಪೂಜೇರಿ, ಶಿವಾನಂದ ಗೌಡರ್, ತಿಪ್ಪಣ್ಣ ಕುಂದರಗಿ, ಆಕಾಶ ಮೆಟಗುಡ್ಡ, ಅರುಣ ಮೇಘೆಣ್ಣವರ, ಶಂಕರ ಶೇರಖಾನೆ, ಯೂನಿಸ್ ಖಾಜಿ, ಪ್ರಕಾಶ ಇತಾಪಿ ಸೇರಿದಂತೆ 54 ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಬಸಲಿಂಗಪ್ಪ ಧವಳೇಶ್ವರ, ಬಸಪ್ಪ ಕಲ್ಯಾಣಿ, ಲಕ್ಷ್ಮಣ ಶೇರೇಗಾರ, ಪತ್ರಕರ್ತ ಬಸವರಾಜ ಎ. ಚಿನಿವಾರ, ವಿಷ್ಣುಪಂತ ಕಲಾಲ ಸೇರಿದಂತೆ ಹಲವರು ಈಶ್ವರ ಎಂ. ಕತ್ತಿ ಅವರ ಸಾಮಾಜಿಕ ಸೇವೆಯನ್ನು ಕೊಂಡಾಡಿದರು.

Related Articles

Leave a Reply

Your email address will not be published. Required fields are marked *

Back to top button