
ಮೂಡಲಗಿ, ನ. ೩: ತಾಲ್ಲೂಕಿನ ಯಾದವಾಡದ ಶ್ರೀ ಗುರುನೀಲಕಂಠ ಸ್ವಾಮಿ ಪ್ರೌಢಶಾಲೆಯಲ್ಲಿ ೧೯೮೩–೮೪ನೇ ಸಾಲಿನ ವಿದ್ಯಾರ್ಥಿಗಳು ೪೨ ವರ್ಷಗಳ ಬಳಿಕ ಆಯೋಜಿಸಿದ್ದ ಗುರುನಮನ ಕಾರ್ಯಕ್ರಮದಲ್ಲಿ ಸಹಪಾಠಿಗಳಾದ ಕೊಪದಟ್ಟಿಯ ಮಹಿಬೂಬಸಾಬ್ ಎಸ್. ಥರಕಾರ್ ಮತ್ತು ಅಮಿನಸಾಬ್ ಎಂ. ಏಳೂರ್ ಅವರು ಅನ್ನದಾಸೋಹ ಸೇವೆ ಸಲ್ಲಿಸಿದರು. ಇವರ ಸೇವೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಪೂಜ್ಯರು ಹಾಗೂ ಅತಿಥಿ ಗಣ್ಯರು ಸನ್ಮಾನಿಸಿದರು.
ಚೌಕಿಮಠದ ವಿಶ್ವಾರಾಧ್ಯ ಮಹಾಸ್ವಾಮೀಜಿ ಮತ್ತು ಶ್ರೀ ಗುರು ಮಾಳಿಂಗೇಶ್ವರ ಸಿದ್ದಗಿರಿ ಸಿದ್ಧಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ, ಚನ್ನಬಸಪ್ಪ ಮುತ್ಯಾ ಹುಬ್ಬಳ್ಳಿ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ನಿವೃತ್ತ ಉಪನ್ಯಾಸಕ ಡಾ. ವೈ.ಎಂ. ಯಾಕೋಳ್ಳಿ, ಜೇಸೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈಶ್ವರ ಎಂ. ಕತ್ತಿ, ನಿವೃತ್ತ ಶಿಕ್ಷಕರಾದ ಎಸ್.ಸಿ. ಗಾಣಿಗೇರ್, ಬಿ.ಎಂ. ಪರಗುಣಿ ಹಾಗೂ ನಿವೃತ್ತ ಜವಾನ ಬಸಲಿಂಗಪ್ಪ ಕಾಗವಾಡ ಅವರ ಉಪಸ್ಥಿತಿಯಲ್ಲಿ ಅನ್ನದಾಸೋಹಿಗಳಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ, ಮೈಸೂರು ಪೇಟ ತೊಡಿಸಿ ಗೌರವಿಸಲಾಯಿತು.
ಬೆಳಿಗ್ಗೆ ಅವಲಕ್ಕಿ, ಎಳ್ಳುಂಡಿ ಮತ್ತು ಬಾಳೆಹಣ್ಣಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಹೂರಣದ ಹೋಳಿಗೆ, ಜೋಳದ ರೊಟ್ಟಿ, ವಿವಿಧ ಬಗೆಯ ಪಲ್ಯ, ಸೆಂಡಿಗೆ, ಹಪ್ಪಳ, ಉಪ್ಪಿನಕಾಯಿ, ಅನ್ನ ಮತ್ತು ಸಾಂಬಾರದ ಭೋಜನವನ್ನು ವಿದ್ಯಾರ್ಥಿಗಳು ಹಾಗೂ ಗಣ್ಯರು ಸವಿದರು. ನೂರಕ್ಕೂ ಹೆಚ್ಚು ಜನರು ಊಟ ಮಾಡಿದರೂ ಇನ್ನೂ ಸುಮಾರು ೫೦ ಜನರಿಗೆ ಸಾಕಾಗುವಷ್ಟು ಆಹಾರ ಉಳಿದಿತ್ತು. ಅನ್ನದಾಸೋಹಿಗಳ ಸೇವೆಯನ್ನು ಅತಿಥಿಗಳು ಮತ್ತು ಸಹಪಾಠಿಗಳು ಶ್ಲಾಘಿಸಿದರು.
ಗುರುನಮನ ಕಾರ್ಯಕ್ರಮದ ಎರಡನೇ ಸಭೆಯಲ್ಲಿ ಮಹಿಬೂಬಸಾಬ್ ಥರಕಾರ್ ಮತ್ತು ಅಮಿನಸಾಬ್ ಏಳೂರ್ ಅವರು ಉಪಾಹಾರ ಹಾಗೂ ಅನ್ನದಾಸೋಹದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಘೋಷಿಸಿದ್ದರು. ಅದರಂತೆ ವ್ಯವಸ್ಥಿತವಾಗಿ ಊಟೋಪಚಾರದ ವ್ಯವಸ್ಥೆ ಮಾಡಿ ಸಹಪಾಠಿಗಳ ಮೆಚ್ಚುಗೆಗೆ ಪಾತ್ರರಾದರು.
ಉಚಿತ ಕಲ್ಯಾಣ ಮಂಟಪ, ವಸತಿ ವ್ಯವಸ್ಥೆ
ಕಾರ್ಯಕ್ರಮದ ಎರಡನೇ ಸಭೆಯ ಬಳಿಕ ಕೆಲವು ಸಹಪಾಠಿಗಳು ಚನ್ನಬಸಪ್ಪ ಮುತ್ಯಾ ಅವರನ್ನು ಭೇಟಿಯಾಗಿ ಕಾರ್ಯಕ್ರಮದ ವ್ಯವಸ್ಥೆಗಳ ಕುರಿತು ಚರ್ಚಿಸಿದರು. ಆಗ ಅವರು ಕಲ್ಯಾಣ ಮಂಟಪವನ್ನು ಉಚಿತವಾಗಿ ನೀಡುವುದರ ಜತೆಗೆ ಅಡುಗೆಗೆ ಅಗತ್ಯವಾದ ಸಾಮಗ್ರಿಗಳು ಹಾಗೂ ವಾಸ್ತವ್ಯಕ್ಕೆ ಕೊಠಡಿಗಳನ್ನು ಉಚಿತವಾಗಿ ಒದಗಿಸುವುದಾಗಿ ತಿಳಿಸಿ, ಅದರಂತೆ ವ್ಯವಸ್ಥೆ ಮಾಡಿಕೊಟ್ಟರು. ಈ ಸಹಕಾರಕ್ಕಾಗಿ ಕಾರ್ಯಕ್ರಮದ ರೂವಾರಿ ಹಾಗೂ ಹಿರೇಕೊಪ್ಪದ ಇಂಗ್ಲಿಷ್ ಶಿಕ್ಷಕ ರಾಜೇಂದ್ರ ಸಿದ್ದಪ್ಪ ಕಲ್ಯಾಣಿ ಅವರು ಚನ್ನಬಸಪ್ಪ ಮುತ್ಯಾ ಅವರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.
ಶಿಕ್ಷಕರ ಗೈರುಹಾಜರಿಗೆ ವಿದ್ಯಾರ್ಥಿಗಳ ನಿರಾಸೆ
ಕಾರ್ಯಕ್ರಮಕ್ಕೆ ನಿವೃತ್ತ ಕನ್ನಡ ಶಿಕ್ಷಕ ಜಿ.ಜಿ. ಹುಬ್ಬಳ್ಳಿ ಅವರು ಕಬ್ಬು ಬೆಳೆಗಾರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮಕ್ಕೆ ಬರುವುದಾಗಿ ಹಲವು ಬಾರಿ ಉತ್ಸಾಹದಿಂದ ತಿಳಿಸಿದ್ದ ಅವರು ಗೈರಾಗಿದ್ದರಿಂದ ವಿದ್ಯಾರ್ಥಿಗಳಿಗೆ ನಿರಾಸೆಯಾಯಿತು.
ಪುಣೆ, ಮೂಡಲಗಿ, ಬೆಳಗಾವಿ, ಮುಧೋಳ, ಮಹಾಲಿಂಗಪುರ ಸೇರಿದಂತೆ ವಿವಿಧ ಊರುಗಳಿಂದ ವಿದ್ಯಾರ್ಥಿನಿಯರು ಒಂದು ದಿನ ಮುಂಚಿತವಾಗಿಯೇ ಯಾದವಾಡಕ್ಕೆ ಆಗಮಿಸಿದ್ದರು. ಎಲ್ಲ ಮಹಿಳಾ ಸಹಪಾಠಿಗಳ ವಾಸ್ತವ್ಯಕ್ಕೆ ಕೊಪದಟ್ಟಿಯ ನಿವಾಸಿ ಹಾಗೂ ಮೂಡಲಗಿಯ ಸೋನವಾಲಕರ್ ಮನೆತನದ ತಾರಾದೇವಿ ಉದಪುಡಿ ಅವರು ತಮ್ಮ ನಿವಾಸದಲ್ಲಿಯೇ ವ್ಯವಸ್ಥೆ ಮಾಡಿಕೊಟ್ಟಿದ್ದರು. ಇದರಿಂದ ಎಲ್ಲ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲವಾಯಿತು.
ಅಥಣಿಯ ಶಿಕ್ಷಕಿ ಸರಳಾ ಕುಲಕರ್ಣಿ ಅವರು ತಮ್ಮ ಮಗನೊಂದಿಗೆ ಕಾರಿನಲ್ಲಿ ಹಲವು ಪ್ರತಿಭಟನೆಗಳ ನಡುವೆಯೂ ಲಭ್ಯವಾದ ಮಾರ್ಗದಲ್ಲಿ ಪ್ರಯಾಣಿಸಿ ಕಾರ್ಯಕ್ರಮಕ್ಕೆ ಹಾಜರಾದ ಅನುಭವ ಹಂಚಿಕೊಂಡರು. ಅದೇ ರೀತಿ ದ್ರಾಕ್ಷಾಯಣಿ ಹಿರೇಮಠ ಅವರು ಪ್ರತಿಭಟನೆಯ ನಡುವೆಯೂ ಮುಧೋಳದಿಂದ ಆಗಮಿಸಿದ್ದು ಗಮನ ಸೆಳೆಯಿತು.
ನಾಲ್ಕು ದಶಕಗಳ ಬಳಿಕ ಒಂದೆಡೆ ಸೇರಿದ್ದ ಸಹಪಾಠಿಗಳು ಪರಸ್ಪರ ಪ್ರೀತಿ, ಸಹಕಾರ ಮತ್ತು ಸೇವಾಭಾವದೊಂದಿಗೆ ಗುರುನಮನ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿದರು.



