ಶಿಕ್ಷಣಸಮಾಜ

ಯಾದವಾಡದಲ್ಲಿ ೪೨ ವರ್ಷಗಳ ಬಳಿಕ ಗುರುನಮನ; ವಿದ್ಯಾರ್ಥಿಗಳ ಸಂಭ್ರಮ ಮುಗಿಲುಮುಟ್ಟಿತು!

ಉಜ್ವಲ ಭವಿಷ್ಯ ರೂಪಿಸಿದ ಶಿಕ್ಷಣ ಸಂಸ್ಥೆಯನ್ನು ಮರೆಯಬೇಡಿ: ಈಶ್ವರ ಎಂ. ಕತ್ತಿ

ಮೂಡಲಗಿ, ನ. ೩: ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ತಮಗೆ ವಿದ್ಯೆ ಕಲಿಸಿ ಬದುಕು ರೂಪಿಸಿಕೊಳ್ಳಲು ನೆರವಾದ ಶಿಕ್ಷಣ ಸಂಸ್ಥೆಯನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ಜೇಸೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಈಶ್ವರ ಎಂ. ಕತ್ತಿ ಹೇಳಿದರು.

ತಾಲ್ಲೂಕಿನ ಯಾದವಾಡ ಗ್ರಾಮದ ಕೊಪದಟ್ಟಿ ಸಮೀಪದ ಮುಧೋಳ ರಸ್ತೆಯಲ್ಲಿರುವ ಹುಬ್ಬಳ್ಳಿ ಮುತ್ಯಾ ಮಠದ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ಗುರುನೀಲಕಂಠ ಸ್ವಾಮಿ ಪ್ರೌಢಶಾಲೆಯ ೧೯೮೩–೮೪ನೇ ಸಾಲಿನ ವಿದ್ಯಾರ್ಥಿಗಳು ೪೨ ವರ್ಷಗಳ ಬಳಿಕ ಆಯೋಜಿಸಿದ್ದ ಗುರುನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಆರಂಭವಾದ ಜಿಎನ್‌ಎಸ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂದು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ. ನಾಲ್ಕು ದಶಕಗಳ ಬಳಿಕ ಇಷ್ಟೊಂದು ಸಂಖ್ಯೆಯಲ್ಲಿ ಸಹಪಾಠಿಗಳು ಒಂದೆಡೆ ಸೇರಿ ಗುರುನಮನ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದರು.

ನಾವೂ ೧೯೭೩–೭೪ನೇ ಸಾಲಿನಲ್ಲಿ ಪ್ರೌಢಶಾಲೆ ಶಿಕ್ಷಣ ಪೂರ್ಣಗೊಳಿಸಿದ್ದು, ನಿಮ್ಮ ಕಾರ್ಯಕ್ರಮದಿಂದ ಪ್ರೇರಣೆ ಪಡೆದು ನಮ್ಮ ಸಹಪಾಠಿಗಳೂ ಗುರುನಮನ ಕಾರ್ಯಕ್ರಮ ಆಯೋಜಿಸುವ ಆಲೋಚನೆ ಮಾಡಿದ್ದೇವೆ. ನಮ್ಮ ಸುಮಾರು ೨೩ ಸಹಪಾಠಿಗಳಿದ್ದು, ಈ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಬಿ.ಬಿ. ಕಲ್ಯಾಣಿ ಅವರ ಉಸ್ತುವಾರಿಯಲ್ಲಿ, ದಿವಂಗತ ವಿಠಲ ಕೃಷ್ಣ ಗುಡಿ ಅವರು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಹನುಮಂತರಾವ್ ಇಟ್ನಾಳ್ ಕೋಶಾಧ್ಯಕ್ಷರಾಗಿ ಹಾಗೂ ಮಹಾಲಿಂಗಪ್ಪ ಈ. ಕತ್ತಿಶೆಟ್ಟಿ, ದಿವಂಗತ ವೆಂಕಟೇಶ ಕೃ. ಖಾಸನೀಸ್, ದಿವಂಗತ ಅಹ್ಮದ್ ಹುಸೇನ್ ಮ. ಖಾಜಿ, ದಿವಂಗತ ಶಂಕ್ರಪ್ಪ ಗಂ. ಹುನಗುಂದೆ, ದಿವಂಗತ ಬಾಳಪ್ಪ, ಆಣ್ಣಾಜಿ ಮ. ಚಿಪ್ಪಲಕಟ್ಟಿ, ಹಣಮಂತಗೌಡ ಬ. ಪಾಟೀಲ ಸೇರಿದಂತೆ ಹಲವು ಗಣ್ಯರ ಪರಿಶ್ರಮದಿಂದ ಶಿಕ್ಷಣ ಸಂಸ್ಥೆ ಸ್ಥಾಪನೆಯಾಯಿತು. ಈ ಸಂಸ್ಥೆ ಈ ಭಾಗದಲ್ಲಿ ಶಿಕ್ಷಣ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಶಾಲೆಯ ಆರಂಭದ ಸಂದರ್ಭದಲ್ಲಿ ಶಿವಮೂರ್ತಿ ಶಿವಾಚಾರ್ಯರು ಉದಾರ ದೇಣಿಗೆ ನೀಡಿದ್ದರು. ಅವರ ಹೆಸರನ್ನು ಶಾಲೆಗೆ ಇಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಆದರೆ, ತಮ್ಮ ಹೆಸರಿನ ಬದಲಿಗೆ ಗುರುಗಳಾದ ಶ್ರೀ ಗುರುನೀಲಕಂಠ ಸ್ವಾಮಿ ಅವರ ಹೆಸರನ್ನೇ ಶಾಲೆಗೆ ಇಡಬೇಕೆಂದು ಶಿವಾಚಾರ್ಯರು ಸೂಚಿಸಿದ್ದರು. ಅದರಂತೆ ಶಾಲೆಗೆ ಶ್ರೀ ಗುರುನೀಲಕಂಠ ಸ್ವಾಮಿ ಪ್ರೌಢಶಾಲೆ ಎಂದು ನಾಮಕರಣ ಮಾಡಲಾಯಿತು ಎಂದು ಸಂಸ್ಥೆಯ ಆರಂಭದ ದಿನಗಳನ್ನು ಸ್ಮರಿಸಿದರು.

ತಮ್ಮ ತಂದೆ ದಿವಂಗತ ಎಂ.ಐ. ಕತ್ತಿ ಅವರು ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುವುದರ ಜತೆಗೆ ದೈಹಿಕ ಶಿಕ್ಷಣ ಮತ್ತು ಗಣಿತ ವಿಷಯಗಳನ್ನು ಬೋಧಿಸಿದ್ದರು. ಆರಂಭದ ದಿನಗಳಲ್ಲಿ ವೇತನ ಪಡೆಯದೆ ವಿದ್ಯಾರ್ಥಿಗಳೊಂದಿಗೆ ಶ್ರಮಿಸಿ ಶಾಲೆಯ ಕಟ್ಟಡ, ಆವರಣ ಗೋಡೆ ಸೇರಿದಂತೆ ಸಂಸ್ಥೆಯ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದ ಈಶ್ವರ ಕತ್ತಿ ಅವರು ಭಾವುಕರಾದರು.

ಗುರು-ಶಿಷ್ಯರ ಬಾಂಧವ್ಯಕ್ಕೆ ಮೆಚ್ಚುಗೆ

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಚೌಕಿಮಠದ ವಿಶ್ವಾರಾಧ್ಯ ಸ್ವಾಮೀಜಿ ಹಾಗೂ ಶ್ರೀ ಗುರು ಮಾಳಿಂಗೇಶ್ವರ ಸಿದ್ದಗಿರಿ ಸಿದ್ಧಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ೪೨ ವರ್ಷಗಳ ಬಳಿಕ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ನೆನೆದು ಗುರುನಮನ ಸಲ್ಲಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಗುರು-ಶಿಷ್ಯರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಚನ್ನಬಸಪ್ಪ ಹುಬ್ಬಳ್ಳಿ ಮುತ್ಯಾ ಅವರು ಮಾತನಾಡಿ, ತಾವೂ ೧೯೮೩–೮೪ನೇ ಸಾಲಿನ ವಿದ್ಯಾರ್ಥಿಯಾಗಿದ್ದು, ಸಹಪಾಠಿಗಳೊಂದಿಗೆ ಮತ್ತೆ ಒಂದಾಗಿರುವುದು ಅಪಾರ ಸಂತಸ ತಂದಿದೆ ಎಂದರು.

ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಚಾರ್ಯ ಡಾ. ವೈ.ಎಂ. ಯಾಕೋಳ್ಳಿ ಅವರು ಮಾತನಾಡಿ, ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಇಂತಹ ಕಾರ್ಯಕ್ರಮಗಳು ಸುವರ್ಣಾವಕಾಶ ಕಲ್ಪಿಸುತ್ತವೆ ಎಂದು ಹೇಳಿದರು.

ಗುರುಗಳಿಗೆ ಸನ್ಮಾನ, ಅಗಲಿದವರಿಗೆ ಶ್ರದ್ಧಾಂಜಲಿ

ನಿವೃತ್ತ ಶಿಕ್ಷಕರಾದ ಎಸ್.ಸಿ. ಗಾಣಿಗೇರ್, ಬಿ.ಎಂ. ಪರಗುಣಿ ಹಾಗೂ ನಿವೃತ್ತ ಜವಾನ ಬಸಲಿಂಗಪ್ಪ ಕಾಗವಾಡ ಅವರನ್ನು ನೆನಪಿನ ಕಾಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು. ಎಲ್ಲ ವಿದ್ಯಾರ್ಥಿಗಳಿಗೂ ನೆನಪಿನ ಕಾಣಿಕೆ ವಿತರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಂಸ್ಥಾಪಕ ಆಡಳಿತ ಮಂಡಳಿಯ ಕುಟುಂಬದ ಸದಸ್ಯರು ಹಾಗೂ ಅಗಲಿದ ಶಿಕ್ಷಕರ ಕುಟುಂಬಸ್ಥರನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಶಿಕ್ಷಕರಾದ ಹೂಗಾರ್, ಬಾಗೇವಾಡಿ, ಎಸ್.ಎಸ್. ಹಿರೇಮಠ, ದಡ್ಡಿಮನಿ, ಎಂ.ಐ. ಕತ್ತಿ, ನಿಂಗಪ್ಪನವರ್, ಗುಡಿ ಮತ್ತು ಕುಂಬಾರ್ ಸೇರಿದಂತೆ ಅಗಲಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸ್ಮರಿಸಿ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದ ರೂವಾರಿ, ಹಿರೇಕೊಪ್ಪದ ಇಂಗ್ಲಿಷ್ ಶಿಕ್ಷಕ ರಾಜೇಂದ್ರ ಎಸ್. ಕಲ್ಯಾಣಿ ನಿರೂಪಿಸಿದರು. ಶಿಕ್ಷಕ ಕುಮಾರೇಶ್ವರ ಹಿರೇಮಠ ಸ್ವಾಗತಿಸಿದರು. ಪತ್ರಕರ್ತ ಬಸವರಾಜ ಚಿನಿವಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ವಂದಿಸಿದರು.

ಸಹಪಾಠಿಗಳ ಪರಿಚಯ, ಹಳೆಯ ನೆನಪುಗಳ ಹಂಚಿಕೆ

ಗುರುನಮನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಗಣ್ಯರು ತಮ್ಮ ಪರಿಚಯ ಮಾಡಿಕೊಂಡು ಹಳೆಯ ನೆನಪುಗಳನ್ನು ಹಂಚಿಕೊಂಡರು. ಗುರುಶಾಂತ ಬಿ. ಕರತಮ್ಮದ್, ಈಶ್ವರ ಎಸ್. ಅಂಬಲಜೇರಿ, ಈಶ್ವರ ಡಿ. ಅಂಗಡಿ, ಲಕ್ಕಪ್ಪ ಟಿ. ಮಂಟಣ್ಣವರ್, ಹನುಮಂತ ಐ. ಮಡಿವಾಳರ್, ಸದಾಶಿವ ಜಿ. ಸವದತ್ತಿ, ಮಲ್ಲಪ್ಪ ಬಿ. ಮಿರ್ಜಿ, ಹಣಮಂತಗೌಡ ಬಿ. ಪಾಟೀಲ, ಬಾಬುಸಾಬ್ ಐ. ಏಳೂರ, ಚನ್ನಲಿಂಗಯ್ಯ ಮಠದ, ಅಮಿನಸಾಬ್ ಎಂ. ದಂತಾಳಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಧಾರವಾಡದ ಸಾದನಕೇರಿಯ ದ.ರಾ. ಬೇಂದ್ರೆ ಖ್ಯಾತಿಯ ವೆಂಕಪ್ಪ ಎಚ್. ಲಕ್ಷ್ಯಾಣಿ, ಗಾನವಿದೂಷಕ ಗುರುಬಸಯ್ಯ ಜಿ. ತುಪ್ಪದ, ಉಪನ್ಯಾಸಕಿ ಗಿರಿಜಾ ಎಸ್. ತಾಂವಶಿ, ಬೆಂಗಳೂರಿನ ಹಿರಿಯ ವ್ಯವಸ್ಥಾಪಕ ಧರಣೇಂದ್ರಪ್ಪ ಸಿ. ಪಲ್ಲೇದ್, ಮುಂಬೈನ ಸುಶೀಲಾ ಸಿ. ದೂಪದ್, ಮಹೇಶ್ವರಿ ಬಿ. ಮುನವಳ್ಳಿ, ಮೂಡಲಗಿಯ ಕವಯಿತ್ರಿ ಗೋದಾವರಿ ಅ. ದೇಶಪಾಂಡೆ, ಅಥಣಿಯ ಶಿಕ್ಷಕಿ ಸರಳಾ ವಿ. ಕುಲಕರ್ಣಿ, ನಿವೃತ್ತ ಶಿಕ್ಷಕ ಸುರೇಶ್ ಎಸ್. ಪೂಜಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಾಲ್ಕು ದಶಕಗಳ ನಂತರ ಗುರುಗಳು, ಸಹಪಾಠಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಭ್ರಮಿಸಿದ್ದು, ಯಾದವಾಡದಲ್ಲಿ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.

Related Articles

Leave a Reply

Your email address will not be published. Required fields are marked *

Back to top button