ಕಲೆಸಾಂಸ್ಕೃತಿಕ

ಸುರೇಶ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಮೆಚ್ಚುಗೆ

ಸತ್ಯವನ್ನು ಚಿತ್ರಿಸುವುದು ಕಲಾವಿದರ ಸಾಮಾಜಿಕ ಜವಾಬ್ದಾರಿ: ಬಾಬುರಾವ್ ಎಚ್.

ಕಲಬುರಗಿ, ಆ.9: ಭಾವನೆಗಳ ಅಭಿವ್ಯಕ್ತಿಗೆ ಚಿತ್ರಕಲೆ ಪರಿಣಾಮಕಾರಿ ಮಾಧ್ಯಮವಾಗಿದ್ದು, ಸತ್ಯವನ್ನು ಚಿತ್ರಿಸುವ ಮನೋಭಾವವನ್ನು ಕಲಾವಿದರು ಬೆಳೆಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಸುಳ್ಳುಗಳ ಪ್ರಚಾರ ಹೆಚ್ಚುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಬಿಂಬಿಸುವುದು ಚಿತ್ರಕಲಾವಿದರ ಜವಾಬ್ದಾರಿಯಾಗಿದೆ ಎಂದು ಹಿರಿಯ ಚಿತ್ರ ಹಾಗೂ ಶಿಲ್ಪಕಲಾವಿದ ಬಾಬುರಾವ್ ಎಚ್. ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ರಾಮಮಂದಿರ ಸಮೀಪದ ಮಾನಕರ್ ಬಡಾವಣೆಯ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಯುವ ಚಿತ್ರಕಲಾವಿದ ಸುರೇಶ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಜಗತ್ತು ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಆದರೆ, ಎಂಜಲು ಎಲೆಯ ಮೇಲೆ ಹೊರಳಾಡಿದರೆ ರೋಗ ಮತ್ತು ಸೋಂಕುಗಳು ನಿವಾರಣೆಯಾಗುತ್ತವೆ ಎಂಬಂತಹ ಭ್ರಮೆಗಳು ಹಾಗೂ ಸುಳ್ಳು ಮಾಹಿತಿಗಳು ಜನಮಾನಸದಲ್ಲಿ ಬಿತ್ತರವಾಗುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಸಮಾಜದ ಮುಖವಾಣಿಯಾಗಿರುವ ದೃಶ್ಯಕಲಾವಿದರು ಹಾಗೂ ಸಾಹಿತಿಗಳು ವೈಜ್ಞಾನಿಕ ಚಿಂತನೆಯ ಮೂಲಕ ಸತ್ಯವನ್ನು ಜನರಿಗೆ ತಿಳಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಬಾಬುರಾವ್ ಎಚ್. ತಿಳಿಸಿದರು.

ಚಿತ್ರಕಲೆ ಮತ್ತು ಸಾಹಿತ್ಯದ ಮೂಲಕ ಸಮಾಜದಲ್ಲಿ ವೈಚಾರಿಕತೆ ಬೆಳೆಸುವ ಅಗತ್ಯವಿದೆ. ಯುವ ಕಲಾವಿದರು ವಿಭಿನ್ನ ಕಲ್ಪನೆ ಹಾಗೂ ಚಿಂತನೆಗಳ ಮೂಲಕ ಸಾಮಾಜಿಕ ವಿಚಾರಗಳನ್ನು ಚಿತ್ರಕಲಾಕೃತಿಗಳಲ್ಲಿ ಸೆರೆಹಿಡಿಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಲಬುರಗಿಯ ಯುವ ಕಲಾವಿದರು ಹೊಸ ಕಲ್ಪನೆ ಮತ್ತು ವಿನೂತನ ಆಲೋಚನೆಗಳೊಂದಿಗೆ ವೀಕ್ಷಕರನ್ನು ಸೆಳೆಯುವಂತಹ ಚಿತ್ರಗಳನ್ನು ರಚಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ಆಕಾರ, ರೂಪ, ಲಯ, ಮೈವಳಿಕೆ, ಪ್ರಮಾಣ ಹಾಗೂ ಬಣ್ಣಗಳ ಮೂಲಕ ಕಲಾವಿದರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರ ಜೊತೆಗೆ ಸಮಾಜವನ್ನು ವಿವಿಧ ಆಯಾಮಗಳಲ್ಲಿ ನೋಡುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಮುಖ್ಯ. ಯುವ ಹಾಗೂ ಕಿರಿಯ ಚಿತ್ರಕಲಾವಿದರು ಪ್ರಯೋಗಶೀಲತೆ, ಸೃಜನಶೀಲತೆ ಮತ್ತು ಹೊಸ ಮಾಧ್ಯಮಗಳ ಬಳಕೆಯ ಕುರಿತು ಅರಿವು ಬೆಳೆಸಿಕೊಂಡು ಕಲಾಕೃತಿಗಳನ್ನು ರಚಿಸಬೇಕು ಎಂದು ಸಲಹೆ ನೀಡಿದರು.

ಚಿತ್ರಕಲಾವಿದ ಹಾಗೂ ಚಿತ್ರಕಲಾ ಶಿಕ್ಷಕ ಸೂರ್ಯಕಾಂತ ನಂದೂರ್ ಮಾತನಾಡಿ, ಯುವ ಕಲಾವಿದರು ವಿಭಿನ್ನ ಕಲ್ಪನೆ ಮತ್ತು ಚಿಂತನೆಯ ಮೂಲಕ ಸಮಾಜದ ಅನೇಕ ಸಂಗತಿಗಳನ್ನು ಚಿತ್ರಕಲಾಕೃತಿಗಳ ಮೂಲಕ ಸಂಚಲನ ಮೂಡಿಸುವ ರೀತಿಯಲ್ಲಿ ಕಟ್ಟಿಕೊಡುತ್ತಿದ್ದಾರೆ. ಕಲಬುರಗಿಯ ಯುವ ಕಲಾವಿದರು ಹೊಸತನದ ಆಲೋಚನೆಗಳಿಂದ ಗಮನ ಸೆಳೆಯುವಂತಹ ಚಿತ್ರಗಳನ್ನು ರಚಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.

ಬಿಸಿಲು ಆರ್ಟ್ ಗ್ಯಾಲರಿ ಮುಖ್ಯಸ್ಥ ಹಾಗೂ ಹಿರಿಯ ಚಿತ್ರಕಲಾವಿದ ವಿ.ಬಿ. ಬಿರಾದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿತ್ರಕಲೆಯಲ್ಲಿ ಅಗಾಧ ಸೌಂದರ್ಯದ ಹೊಳಪು ಅಡಗಿದೆ. ಮುಕ್ತ ಮನಸ್ಸಿನಿಂದ ಕಲಾಕೃತಿಗಳನ್ನು ವೀಕ್ಷಿಸಿದಾಗ ಮಾತ್ರ ಅದರ ನಿಜವಾದ ಸೌಂದರ್ಯವನ್ನು ಅನುಭವಿಸಲು ಸಾಧ್ಯ. ಚಿತ್ರಕಲಾಕೃತಿಗಳ ಮಾರಾಟದ ಬೆಲೆಗಿಂತ ಅವುಗಳಲ್ಲಿರುವ ಆಂತರಿಕ ಸೌಂದರ್ಯ, ಕಲ್ಪನೆ ಮತ್ತು ಸೃಜನಶೀಲತೆಗೆ ಹೆಚ್ಚಿನ ಮೌಲ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲಾವಿದರಾದ ಶ್ರೀಶೈಲ ಗುಡೇದ್, ಅಂಬಾರಾಯ ಚಿನ್ಮಳ್ಳಿ, ಶೈಲಜ ಬಿರಾದಾರ್, ನಿಂಗಣ್ಣ ಕೇರಿ, ಗಿರೀಶ್ ಕುಲಕರ್ಣಿ, ಶಶಿಕಾಂತ ಪಾಟೀಲ, ರಾಮಗಿರಿ ಪೊಲೀಸ್ ಪಾಟೀಲ, ಬಿ.ಎನ್. ಪಾಟೀಲ, ಕುಪೇಂದ್ರ, ವಿಜಯಕುಮಾರ್ ಅವರಾದ್, ದಾನಯ್ಯ ಚೌಕಿಮಠ, ಕವಿತಾ ಕಟ್ಟೆ ಸೇರಿದಂತೆ ಹಲವರು ಹಾಗೂ ಕಲಾಸಕ್ತರು ಮತ್ತು ಚಿತ್ರಕಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕು. ನಾಗವೇಣಿ ಪ್ರಾರ್ಥಿಸಿದರು. ಡಾ. ಪರಶುರಾಮ ಸ್ವಾಗತಿಸಿದರು. ಮಲ್ಲಿಕಾರ್ಜುನ ಮುಗುಳಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಕೊರಳ್ಳಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button