ಜಿಲ್ಲಾಸುದ್ದಿ

ಕಲ್ಯಾಣ ಕರ್ನಾಟಕ ಉತ್ಸವ ಸೆ.17ರ ಬದಲು 18ರಂದು ಆಚರಿಸಲು ವಿನೋದಕುಮಾರ್ ಆಗ್ರಹ

ಕಲಬುರಗಿ, ಸೆ.9: ಕಲ್ಯಾಣ ಕರ್ನಾಟಕ ಉತ್ಸವವನ್ನು ಸೆಪ್ಟೆಂಬರ್ 17ರ ಬದಲಾಗಿ ಸೆಪ್ಟೆಂಬರ್ 18ರಂದು ಆಚರಿಸಲು ರಾಜ್ಯ ಸರ್ಕಾರ ತಿದ್ದುಪಡಿ ಮಾಡಬೇಕು ಎಂದು ಕೆವೈಎಫ್ ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ಜೆ. ವಿನೋದಕುಮಾರ್ ಜೇನವಾರಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಕಲ್ಯಾಣ ಕರ್ನಾಟಕ ಭಾಗದ ಭವ್ಯ ಇತಿಹಾಸ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಸೆಪ್ಟೆಂಬರ್ 18ರಂದು ವಿಮೋಚನಾ ದಿನ ಆಚರಿಸುವ ಪರಂಪರೆ ನಡೆದುಕೊಂಡು ಬಂದಿದೆ ಎಂದು ತಿಳಿಸಿದ್ದಾರೆ.

1995ರಲ್ಲಿ ಮೊದಲ ಬಾರಿಗೆ ಉದಯೋನ್ಮುಖ ಬರಹಗಾರರ ಬಳಗದ ಮೂಲಕ ವಿಮೋಚನಾ ದಿನ ಆಚರಿಸಲಾಗಿತ್ತು. ಬಳಿಕ 2013ರಿಂದ ತಮ್ಮ ಕೆವೈಎಫ್ ಸಮಿತಿ ವತಿಯಿಂದಲೂ ನಿರಂತರವಾಗಿ ಮನವಿ ಸಲ್ಲಿಸುತ್ತಾ ಬರಲಾಗುತ್ತಿದೆ. ಆದರೆ ರಾಜ್ಯ ಸರ್ಕಾರವು 1998ರಲ್ಲಿ ಯಾವುದೇ ದಾಖಲೆ ಆಧಾರವಿಲ್ಲದೆ ಸೆಪ್ಟೆಂಬರ್ 18ರ ಬದಲಾಗಿ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ನ್ಯಾಯವಾದಿ ದಿ. ಯಶವಂತರಾವ್ ಪಾಟೀಲ ರೇವೂರ್ ಅವರು 2021ರ ಜುಲೈ 2ರಂದು ಸರ್ಕಾರಕ್ಕೆ ಸಲ್ಲಿಸಿದ್ದ ಅಧಿಕೃತ ದಾಖಲೆಗಳನ್ನು ಪರಿಗಣಿಸಬೇಕು. ಈ ಕುರಿತು ಹಲವು ದಾಖಲೆಗಳನ್ನು ಸಲ್ಲಿಸಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಆಡಳಿತ ವ್ಯವಸ್ಥೆ ಸ್ಪಂದಿಸಿಲ್ಲ ಎಂದು ವಿನೋದಕುಮಾರ್ ಆರೋಪಿಸಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲಾಧಿಕಾರಿಗಳ ತುರ್ತು ಸಭೆ ಕರೆದು, ಸಭೆಯ ನಡಾವಳಿಯನ್ನು ಸರ್ಕಾರಕ್ಕೆ ಶೀಘ್ರವಾಗಿ ಸಲ್ಲಿಸಬೇಕು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಿ ಅಗತ್ಯ ತಿದ್ದುಪಡಿ ಮೂಲಕ ಹೊಸ ಆದೇಶ ಹೊರಡಿಸಿ ಸೆ.18ರಂದು ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲು ಅನುಕೂಲ ಮಾಡಿಕೊಡಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರಸ್ತುತ ಸೆ.17ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನಾಂಕವನ್ನು ಬದಲಾಯಿಸುವುದರಿಂದ ಈ ಭಾಗದ ಇತಿಹಾಸ ಹಾಗೂ ವಿಮೋಚನೆಗಾಗಿ ಹೋರಾಡಿದ ಹುತಾತ್ಮರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ತಪ್ಪು ದಿನಾಂಕ ಮುಂದುವರಿಸುವುದರಿಂದ ಯುವ ಪೀಳಿಗೆಗೆ ತಪ್ಪು ಇತಿಹಾಸ ತಿಳಿಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಆದ್ದರಿಂದ ಸೆ.17ರ ಬದಲಾಗಿ ಸೆ.18ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಆಚರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನೋದಕುಮಾರ್ ಜೇನವಾರಿ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button