ಕೋಟಿ ಸೂರ್ಯನಾರಾಯಣ ಜಪಾನುಷ್ಠಾನಕ್ಕೆ ಪೇಜಾವರ ಶ್ರೀಗಳ ಮಂಗಲಾಶೀರ್ವಾದ
ಯೋಗೀಶ್ವರ ಯಾಜ್ಞವಲ್ಕ್ಯ ಮೂರ್ತಿ ಪುನರ್‌ಪ್ರತಿಷ್ಠಾಪನೆ ಯಶಸ್ವಿಯಾಗಲಿ ಎಂದು ಹಾರೈಕೆ

ಕಲಬುರಗಿ, ನ. ೪: ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಭವನದಲ್ಲಿ ನಡೆಯುತ್ತಿರುವ ಕೋಟಿ ಸೂರ್ಯನಾರಾಯಣ ನಾಮಜಪದ ಅಂಗವಾಗಿ ಬುಧವಾರ ಪೇಜಾವರ ಮಠದ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಶ್ರೀಗಳು ಭಗವಾನ್ ಸೂರ್ಯನಾರಾಯಣ ದೇವರು ಹಾಗೂ ಮಹರ್ಷಿ ಯೋಗೀಶ್ವರ ಯಾಜ್ಞವಲ್ಕ್ಯರಿಗೆ ವಿಶೇಷ ಮಂಗಳಾರತಿ ಸಲ್ಲಿಸಿದರು. ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿಯ ವತಿಯಿಂದ ಶ್ರೀಗಳಿಗೆ ಭಕ್ತಿಪೂರ್ವಕವಾಗಿ ಪಾದಪೂಜೆ ನೆರವೇರಿಸಲಾಯಿತು.
ರಥಸಪ್ತಮಿಯ ಪವಿತ್ರ ಸಂದರ್ಭದಲ್ಲಿ ಸಮಿತಿಯು ಹಮ್ಮಿಕೊಂಡಿರುವ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯರ ಮೂರ್ತಿಯ ಪುನರ್‌ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾರೈಸಿದರು. ಬಳಿಕ ನೆರೆದಿದ್ದ ಸಮಿತಿ ಸದಸ್ಯರು ಹಾಗೂ ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಶ್ರೀಪಾದರ ಆಗಮನ ಮತ್ತು ಆಶೀರ್ವಾದದಿಂದ ಭಕ್ತರಲ್ಲಿ ವಿಶೇಷ ಧಾರ್ಮಿಕ ಸಂಭ್ರಮ ಹಾಗೂ ಸಂತಸ ಮನೆಮಾಡಿತ್ತು.
ಈ ಸಂದರ್ಭದಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.



