ರಾಜ್ಯ

ಬರ ಘೋಷಿಸಿ, ರೈತರ ಸಾಲ ಮನ್ನಾ ಮಾಡಿ: ರೈತರ ಪಾದಯಾತ್ರೆ ಪ್ರತಿಭಟನೆ

ಕಲಬುರಗಿಯಲ್ಲಿ ರೈತ ಸಂಘದ ಬೃಹತ್ ಪ್ರತಿಭಟನೆ; ಬರ ಪರಿಹಾರ, ಸಾಲ ಮನ್ನಾ ಹಾಗೂ ಎನ್‌ಡಿಆರ್‌ಎಫ್‌ ನಿಧಿ ಬಿಡುಗಡೆಗೆ ಆಗ್ರಹ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯನ್ನೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಶನಿವಾರ ಕಲಬುರಗಿಯಲ್ಲಿ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಯಿತು.

ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲಾ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಪಾದಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್.ಕೆ. ಕಾಂತಾ, ಜಗದೇವಪ್ಪ ಪಾಟೀಲ, ಭಗವಂತರಾವ್ ಪಾಟೀಲ, ಮಹೇಶ್ ಕಡೆಯಚೂರು, ಡಾ. ಶಿವಲಿಂಗಪ್ಪ ಗೌಳಿ, ನಾಗೇಂದ್ರಪ್ಪ ಆರ್. ದಂಡೋತಿಕರ್, ಶಿವಾನಂದ ಮಠಪತಿ, ಉಮಾಪತಿ ಪಾಟೀಲ, ಶಾಂತಲಿಂಗಪ್ಪ ಪಡಶೆಟ್ಟಿ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು.

ಮನವಿಯಲ್ಲಿ, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿವೆ. ನಾಟಿ, ಸಸಿ ಹಾಗೂ ಮೇವು-ನೀರಿನ ಕೊರತೆಯಿಂದ ಕೃಷಿ ಮತ್ತು ಪಶುಸಂಗೋಪನೆ ಎರಡೂ ಕ್ಷೇತ್ರಗಳು ಸಂಕಷ್ಟದಲ್ಲಿವೆ ಎಂದು ವಿವರಿಸಲಾಗಿದೆ.

ಕಳೆದ ಮೂರು-ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರಿಗೆ ನಿರಂತರ ನಷ್ಟ ಉಂಟಾಗುತ್ತಿದ್ದು, ರೈತ ಕುಟುಂಬಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಆದ್ದರಿಂದ ರಾಜ್ಯದ ಎಲ್ಲಾ ರೈತರಿಗೆ ತಕ್ಷಣವೇ ಬರ ಪರಿಹಾರ, ಬೆಳೆ ನಷ್ಟ ಪರಿಹಾರ ಹಾಗೂ ಕೃಷಿ ಸಾಲ ಮನ್ನಾ ಘೋಷಿಸಬೇಕು ಎಂದು ಆಗ್ರಹಿಸಲಾಗಿದೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದರೂ ಇದುವರೆಗೆ ಸರ್ಕಾರ ಅಧಿಕೃತವಾಗಿ ಬರ ಘೋಷಿಸಿಲ್ಲ ಮತ್ತು ಸಮರ್ಪಕ ಪರಿಹಾರ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button