ಧಾರ್ಮಿಕಸಮಾಜ

ಆದಿ ಶಂಕರಾಚಾರ್ಯರ ಬಗ್ಗೆ ಅವಹೇಳನ ಖಂಡನೆ; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕಲಬುರಗಿಯಲ್ಲಿ ವಿಶೇಷ ಪಾರಾಯಣ ನಡೆಸಿದ ಭಕ್ತರು; ಧಾರ್ಮಿಕ ಸಾಮರಸ್ಯ ಕಾಪಾಡುವಂತೆ ಕರೆ

ಜಗದ್ಗುರು ಆದಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕರುಣೇಶ್ವರ ನಗರದ ಶ್ರೀ ಜೈ ವೀರ ಹನುಮಾನ್ ದೇವಸ್ಥಾನದ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅವಿನಾಶ್ ಕುಲಕರ್ಣಿ ಆಗ್ರಹಿಸಿದರು.

ನಗರದ ಕರುಣೇಶ್ವರ ನಗರದ ಶ್ರೀ ಜೈ ವೀರ ಹನುಮಾನ್ ದೇವಸ್ಥಾನದಲ್ಲಿ ಪಾರಾಯಣ ಸಂಘದ ವತಿಯಿಂದ ಆಯೋಜಿಸಿದ್ದ ವಿಶೇಷ ಪಾರಾಯಣ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಆದಿ ಶಂಕರಾಚಾರ್ಯರು ದೇಶದಾದ್ಯಂತ ಸಂಚರಿಸಿ ನಾಲ್ಕು ಪ್ರಮುಖ ಮಠಗಳನ್ನು ಸ್ಥಾಪಿಸುವ ಮೂಲಕ ಸನಾತನ ಧರ್ಮದ ಪುನರುಜ್ಜೀವನಕ್ಕೆ ಮಹತ್ತರ ಕೊಡುಗೆ ನೀಡಿದ ಜಗದ್ಗುರುಗಳಾಗಿದ್ದಾರೆ ಎಂದು ಹೇಳಿದರು.

ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದು ಸಮಾಜದಲ್ಲಿ ದ್ವೇಷ ಹಾಗೂ ವೈಮನಸ್ಸು ಹುಟ್ಟುಹಾಕುವ ಪ್ರಯತ್ನವಾಗಿದೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪಾರಾಯಣ ಸಂಘದ ವಿನುತಾ ಜೋಶಿ ಮಾತನಾಡಿ, ಆದಿ ಶಂಕರಾಚಾರ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರಿಗೆ ಭಗವಂತ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿದರು. ಸಂತರು, ಮಹಾತ್ಮರು ಹಾಗೂ ಧಾರ್ಮಿಕ ಮಹನೀಯರ ಕುರಿತು ಮಾತನಾಡುವಾಗ ಎಲ್ಲರೂ ಸಂಯಮ, ಗೌರವ ಮತ್ತು ಜವಾಬ್ದಾರಿಯನ್ನು ಪಾಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆದಿ ಶಂಕರಾಚಾರ್ಯರ ಗೌರವಾರ್ಥ ವಿಶೇಷ ಪಾರಾಯಣ ನಡೆಸಿ, ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಹಾಗೂ ಚರಮ ಶ್ಲೋಕವನ್ನು 11 ಬಾರಿ ಪಠಿಸಲಾಯಿತು. ದೇಶದಲ್ಲಿ ಧಾರ್ಮಿಕ ಸಾಮರಸ್ಯ, ಶಾಂತಿ ಹಾಗೂ ಸನಾತನ ಧರ್ಮದ ರಕ್ಷಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಶಂಕರರಾವ್ ಸಿಂದಗಿಕರ್, ಲಕ್ಷ್ಮೀಕಾಂತ ರಾವ್ ಕುಲಕರ್ಣಿ, ಶಶಿಧರ್ ಜೋಶಿ, ಕಿಶನರಾವ್ ಕುಲಕರ್ಣಿ, ಸಮೀರ್ ಕುಲಕರ್ಣಿ, ವಿನೋದ್ ಸಾಥಖೇಡ್, ನರಸಿಂಗರಾವ್ ಕುಲಕರ್ಣಿ, ಸವಿತಾ ಕುಲಕರ್ಣಿ, ದೇವಸ್ಥಾನದ ಅರ್ಚಕರಾದ ಪ್ರದ್ಯುಮ್ನಾಚಾರ್ಯ ಜೋಶಿ, ವೆಂಕಟೇಶಾಚಾರ್ಯ ನೆಲೋಗಿ, ವ್ಯವಸ್ಥಾಪಕ ಚಂದ್ರಕಾಂತ್ ಕಡೆಯಗಂಚಿ ಸೇರಿದಂತೆ ಭಜನಾ ಮಂಡಳಿ, ದೇವಸ್ಥಾನ ಸಮಿತಿ ಹಾಗೂ ಪಾರಾಯಣ ಸಂಘದ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button