ಧಾರ್ಮಿಕ

ಇಷ್ಟಲಿಂಗವನ್ನು ಸದಾ ದೇಹದ ಮೇಲೆ ಧರಿಸಬೇಕು: ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮೀಜಿ

ಗುರುವಿನ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಮುಕ್ತಿ ಸಾಧ್ಯ ಎಂದು ಸಂದೇಶ

ಕಲಬುರಗಿ, ಆ.4: ಇಷ್ಟಲಿಂಗವು ಮನುಷ್ಯನ ದೇಹದ ಅವಿಭಾಜ್ಯ ಅಂಗದಂತಿದ್ದು, ಅದನ್ನು ಸದಾ ದೇಹದ ಮೇಲೆ ಧರಿಸಬೇಕು. ಭಸ್ಮ, ರುದ್ರಾಕ್ಷಿ ಹಾಗೂ ಗುರುವಿನ ಮಂತ್ರಗಳನ್ನು ನಿರಂತರವಾಗಿ ಸ್ಮರಿಸುತ್ತಾ, ಗುರುವಿನ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಜ್ಜಯಿನಿಯ ಸದ್ದರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.

ನಗರದ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ ಹಾಗೂ ಇಷ್ಟಲಿಂಗ ಮಹಾಪೂಜೆಯಲ್ಲಿ ಆಶೀರ್ವಚನ ನೀಡಿದ ಅವರು, ಗುರುವಿನ ಉಪದೇಶವನ್ನು ಕೇವಲ ಕೇಳುವುದಲ್ಲ, ಅದನ್ನು ಅರಿತು ಜೀವನದಲ್ಲಿ ಅನುಸರಿಸುವುದೇ ನಿಜವಾದ ಸಾಧನೆ ಎಂದು ತಿಳಿಸಿದರು.

ಅಷ್ಟಾವರಣಗಳಾದ ಭಸ್ಮ, ರುದ್ರಾಕ್ಷಿ ಹಾಗೂ ಇಷ್ಟಲಿಂಗವನ್ನು ದೇಹದ ಅಂಗಗಳಂತೆ ಸದಾ ಧರಿಸಿ, ನಿತ್ಯ ಪೂಜೆ ಸಲ್ಲಿಸಿದರೆ ಇದೇ ಜನ್ಮದಲ್ಲಿ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ನೇತೃತ್ವವನ್ನು ಕಡಗಂಚಿಯ ವೀರಭದ್ರ ಶಿವಾಚಾರ್ಯರು ವಹಿಸಿದ್ದರು. ಚಂದನಕೇರಿಯ ರಾಚೋಟೇಶ್ವರ ಶಿವಾಚಾರ್ಯರು, ಜೇವರ್ಗಿಯ ಶಿವಶಾಂತಲಿಂಗೇಶ್ವರ ಶಿವಾಚಾರ್ಯರು, ಕಪನೂರಿನ ಮಲ್ಲಿಕಾರ್ಜುನ ಸ್ವಾಮೀಜಿ, ಟೇಂಗಳಿ, ಸುಲೇಪೇಟೆ ಹಾಗೂ ಕಡಗಂಚಿಯ ಪಂಪಾಪತಿ ದೇವರುಗಳು ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅನ್ನಾರಾವ್ ಬೆನ್ನೂರ, ಅಪ್ಪಾರಾವ್ ಬೆನ್ನೂರ, ಶಿವಾನಂದ ಬೆನ್ನೂರ, ಸಿದ್ಧೇಶ್ವರ ಶಾಸ್ತ್ರಿಗಳು, ಸಿದ್ದರಾಮಪ್ಪ ಆಲಗೂಡಕರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇಷ್ಟಲಿಂಗ ಮಹಾಪೂಜೆಯಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಗುರುಕುಲದ ಸಾಧಕರಿಂದ ರುದ್ರಾಭಿಷೇಕ ನೆರವೇರಿತು. ಚೇತನ ಬೀದಿಮನಿ ಹಾಗೂ ಮಹಾಂತಯ್ಯಸ್ವಾಮಿ ನಿಂಗದಳ್ಳಿ ಅವರಿಂದ ಸಂಗೀತ ಸೇವೆ ನಡೆಯಿತು. ಯುವ ಸಾಹಿತಿ ಶಿವಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button