ಜಗದ್ಗುರು ರೇಣುಕಾಚಾರ್ಯರ ಕೊಡುಗೆ ಅಮೂಲ್ಯ: ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮೀಜಿ
ರೇಣುಕಾಚಾರ್ಯರ ಸಂದೇಶ ಸಮಾಜಕ್ಕೆ ದಾರಿದೀಪ; ಜಾತಿ ಮೀರಿದ ಮಾನವೀಯ ಮೌಲ್ಯಗಳ ಪ್ರತಿಪಾದನೆ ಎಂದ ಶ್ರೀಗಳು

ಕಲಬುರಗಿ, ಆ.4: ಸುಖಮಯ ಜೀವನಕ್ಕೆ ಧರ್ಮಾಚರಣೆ ಅತ್ಯಗತ್ಯವಾಗಿದ್ದು, ಮಾನವ ಜೀವನವನ್ನು ಸಾರ್ಥಕಗೊಳಿಸುವಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂದೇಶಗಳು ದಾರಿದೀಪವಾಗಿವೆ ಎಂದು ಉಜ್ಜಯಿನಿಯ ಸದ್ದರ್ಮ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ಸೊಗಸನಕೇರಿಯ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ ಆಧ್ಯಾತ್ಮಿಕ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಜಾತಿ-ಜನಾಂಗಗಳ ಗಡಿಗಳನ್ನು ಮೀರಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಕೊಡುಗೆ ಅಮೂಲ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ವಹಿಸಿದ್ದರು. ಶರಣ ಸಂಸ್ಥಾನದ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ ಧರ್ಮಸಭೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶರಣ ಸಂಸ್ಥಾನದ ಅಲ್ಲಮಪ್ರಭುಗಳು, ಚಂದನಕೇರಿಯ ರಾಚೋಟಿ ಶಿವಾಚಾರ್ಯರು, ಜೇವರ್ಗಿಯ ಶಿವಶಾಂತಲಿಂಗೇಶ್ವರ ಶಿವಾಚಾರ್ಯರು, ಟೇಂಗಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ಧಾನಂದ ಶಿವಯೋಗಿಗಳು, ಕಡಗಂಚಿ, ಸುಲೇಪೇಟೆ ಶ್ರೀಗಳು, ಅಮೃತಪ್ಪ ಮಹಾಗಾಂವ, ಶಿವಾನಂದ ಪಠಪತಿ, ಮಲ್ಲಣ್ಣ ಕಣ್ಣಿ, ಚಂದ್ರಕಾಂತ ಹಾವನೂರ, ಮಲ್ಲಿಕಾರ್ಜುನ ತಡಕಲ್, ವೀರಣ್ಣ ಹೊನ್ನಶೆಟ್ಟಿ, ಕರಬಸಪ್ಪ ಅಮರಗೋಳ ಹಾಗೂ ಶಿವಕಾಂತ ಮಹಾಜನ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಚೇತನ ಬೀದಿಮನಿ ಹಾಗೂ ಮಹಾಂತಯ್ಯ ನಿಂಗದಳ್ಳಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಯುವ ಸಾಹಿತಿ ಶಿವಯ್ಯ ಮಠಪತಿ ಕಾರ್ಯಕ್ರಮವನ್ನು ನಿರೂಪಿಸಿದರು.



