ಜ್ಞಾನ ಮತ್ತು ಕೌಶಲ್ಯವೇ ವಿದ್ಯಾರ್ಥಿಗಳ ನಿಜವಾದ ಶಕ್ತಿ: ಪ್ರೊ. ಬಟ್ಟು ಸತ್ಯನಾರಾಯಣ
ಕೇಂದ್ರಿಯ ವಿಶ್ವವಿದ್ಯಾಲಯದ ನೂತನ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪರಿಚಯ ಕಾರ್ಯಕ್ರಮದಲ್ಲಿ ಕುಲಪತಿಗಳ ಕರೆ

ಕಲಬುರಗಿ, ಆ.4: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪ್ರಮಾಣಪತ್ರಕ್ಕಿಂತ ಜ್ಞಾನ ಮತ್ತು ಕೌಶಲ್ಯಗಳೇ ವಿದ್ಯಾರ್ಥಿಗಳ ನಿಜವಾದ ಶಕ್ತಿಯಾಗಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ನಗರದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆಡಿಟೋರಿಯಂ–2ರಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗ (ಡಿಎಸ್‌ಡಬ್ಲ್ಯು) ವತಿಯಿಂದ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಾಗತ ಹಾಗೂ ಪರಿಚಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವಿಶ್ವವಿದ್ಯಾಲಯದ ಜೀವನವನ್ನು ಶೈಕ್ಷಣಿಕ ಸಾಧನೆ, ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿ ನಿರ್ಮಾಣಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕೇವಲ ಪರೀಕ್ಷೆಗಳಿಗೆ ಸೀಮಿತವಾಗದೆ ಹೊಸ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು, ಸಂಶೋಧನಾ ಮನೋಭಾವ ಬೆಳೆಸಿಕೊಳ್ಳುವುದು ಹಾಗೂ ಉದ್ಯೋಗಾರ್ಹತೆಯನ್ನು ಹೆಚ್ಚಿಸಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.
ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಸಂಸ್ಕೃತಿಗಳನ್ನು ಅರಿಯುವ ಅವಕಾಶ ಈ ವಿಶ್ವವಿದ್ಯಾಲಯದಲ್ಲಿ ದೊರೆಯುತ್ತದೆ. ಇದರಿಂದ ಪರಸ್ಪರ ಕಲಿಕೆ ಮತ್ತು ರಾಷ್ಟ್ರೀಯ ಏಕತೆ ಬಲಗೊಳ್ಳುತ್ತದೆ ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಉದ್ಯೋಗ ನಿಯೋಜನಾ ಘಟಕ (ಪ್ಲೇಸ್‌ಮೆಂಟ್ ಸೆಲ್), ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ಭಾಷಾ ಕಲಿಕಾ ಪ್ರಯೋಗಾಲಯ, ಕೇಂದ್ರ ಗ್ರಂಥಾಲಯ, ಆಧುನಿಕ ಪ್ರಯೋಗಾಲಯಗಳು, ವಿದ್ಯಾರ್ಥಿವೇತನ ಯೋಜನೆಗಳು ಹಾಗೂ ವಸತಿ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ವಿಭಾಗಗಳ ಡೀನ್‌ಗಳಾದ ಪ್ರೊ. ಪಾಂಡುರಂಗ ವಿ., ಪ್ರೊ. ಆರ್.ಎಸ್. ಹೆಗಡಿ, ಪ್ರೊ. ವಿಕ್ರಮ್ ವಿಸಾಜಿ ಹಾಗೂ ಪ್ರೊ. ಪವಿತ್ರಾ ಆರ್. ಆಲೂರ್ ಅವರು ವಿಭಾಗಗಳ ಶೈಕ್ಷಣಿಕ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳಿಗೆ ಲಭ್ಯವಿರುವ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ ಪರೀಕ್ಷಾ ವಿಭಾಗ, ವಿದ್ಯಾರ್ಥಿವೇತನ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ಕ್ರೀಡೆ, ಭಾಷಾ ಪ್ರಯೋಗಾಲಯ, ಉದ್ಯೋಗ ನಿಯೋಜನಾ ಘಟಕ, ಉದ್ಯಮಶೀಲತೆ, ವಸತಿ ಸೌಲಭ್ಯ ಹಾಗೂ ಇತರ ಸೇವೆಗಳ ಕುರಿತು ಸಂಬಂಧಿತ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ಅಧಿಕಾರಿಗಳು ಹಾಗೂ ನೂತನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡಾ. ಶ್ರೀಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.



