ಕಲಬುರಗಿ–ಮೈಸೂರು, ಶಿವಮೊಗ್ಗಕ್ಕೆ ನೂತನ ಸ್ಲೀಪರ್ ಬಸ್ ಸೇವೆಗೆ ಚಾಲನೆ; ಮೂರು ತಿಂಗಳಲ್ಲಿ 120 ಹೊಸ ಬಸ್ ಸೇರ್ಪಡೆ
ಕೆಕೆಆರ್‌ಟಿಸಿಗೆ 750 ಬಸ್‌ಗಳ ಅಗತ್ಯ; ₹45 ಕೋಟಿ ಅನುದಾನದಲ್ಲಿ ಹೊಸ ಬಸ್ ಖರೀದಿ ಪ್ರಕ್ರಿಯೆ ಆರಂಭ – ಅಧ್ಯಕ್ಷ ಅರುಣಕುಮಾರ ಪಾಟೀಲ

ಕಲಬುರಗಿ, ಜು.29: ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಲಬುರಗಿ–ಮೈಸೂರು ನಾನ್ ಎಸಿ ಸ್ಲೀಪರ್ ಹಾಗೂ ಕಲಬುರಗಿ–ಶಿವಮೊಗ್ಗ ಎಸಿ ಸ್ಲೀಪರ್ ಬಸ್ ಸೇವೆಗೆ ಬುಧವಾರ ಅಧಿಕೃತ ಚಾಲನೆ ನೀಡಲಾಯಿತು. ಇದೇ ವೇಳೆ ಮುಂದಿನ ಮೂರು ತಿಂಗಳಲ್ಲಿ 120 ಹೊಸ ಬಸ್‌ಗಳು ಕೆಕೆಆರ್‌ಟಿಸಿ ಸಂಸ್ಥೆಗೆ ಸೇರ್ಪಡೆಯಾಗಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಪಾಟೀಲ ತಿಳಿಸಿದರು.
ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ನೂತನ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಥೆಗೆ ಇನ್ನೂ ಸುಮಾರು 750 ಬಸ್‌ಗಳ ಅವಶ್ಯಕತೆ ಇದೆ. ಈ ಕೊರತೆಯನ್ನು ನೀಗಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹45 ಕೋಟಿ ಅನುದಾನದಲ್ಲಿ 120 ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮೂರು ತಿಂಗಳೊಳಗೆ ಬಸ್‌ಗಳು ಕಾರ್ಯಾಚರಣೆಗೆ ಬರಲಿವೆ ಎಂದು ಹೇಳಿದರು.
ಈಗಾಗಲೇ ಸಂಸ್ಥೆಯ ಅನುದಾನದಲ್ಲಿ ಖರೀದಿಸಿರುವ 56 ಬಸ್‌ಗಳ ಪೈಕಿ ಕಲಬುರಗಿ, ಬಳ್ಳಾರಿ ಹಾಗೂ ವಿಜಯಪುರ ವಿಭಾಗಗಳಲ್ಲಿ 12 ಬಸ್‌ಗಳ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಅದರ ಭಾಗವಾಗಿ ಕಲಬುರಗಿ–ಮೈಸೂರು ಮಾರ್ಗದಲ್ಲಿ ಎರಡು ನಾನ್ ಎಸಿ ಸ್ಲೀಪರ್ ಹಾಗೂ ಕಲಬುರಗಿ–ಶಿವಮೊಗ್ಗ ಮಾರ್ಗದಲ್ಲಿ ಎರಡು ಎಸಿ ಸ್ಲೀಪರ್ ಬಸ್‌ಗಳ ಸಂಚಾರ ಆರಂಭಿಸಲಾಗಿದೆ. ಈ ಬಸ್‌ಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ದೂರ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಆರಾಮದಾಯಕ ಸೇವೆ ಒದಗಿಸಲಿವೆ ಎಂದು ತಿಳಿಸಿದರು.
ಕಲಬುರಗಿ ನಗರದಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆಯಾಗದಂತೆ ಕ್ಯೂಆರ್ ಕೋಡ್ ಮೂಲಕ ಪಾವತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿಯಲ್ಲಿ 100 ಹಾಗೂ ವಿಜಯಪುರ–ಬಳ್ಳಾರಿ ವಿಭಾಗದಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುವ ಯೋಜನೆಯೂ ಇದೆ ಎಂದು ಅವರು ಹೇಳಿದರು.
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ನಗರದ ಸಂಚಾರ ದಟ್ಟಣೆ ನಿವಾರಣೆಗೆ ನಾಲ್ಕು ದಿಕ್ಕುಗಳಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಕಲಬುರಗಿ–ಮೈಸೂರು ನಡುವಿನ 667 ಕಿ.ಮೀ. ಪ್ರಯಾಣಕ್ಕೆ ₹1,262 ಹಾಗೂ ಕಲಬುರಗಿ–ಶಿವಮೊಗ್ಗ ನಡುವಿನ 547 ಕಿ.ಮೀ. ಎಸಿ ಸ್ಲೀಪರ್ ಪ್ರಯಾಣಕ್ಕೆ ₹1,195 ಕೈಗೆಟಕುವ ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೋಮಶೇಖರ ಹಿರೇಮಠ ಮಾತನಾಡಿ, ಶಕ್ತಿ ಯೋಜನೆಯಿಂದ ಮಹಿಳೆಯರ ಬಸ್ ಸಂಚಾರ ಗಣನೀಯವಾಗಿ ಹೆಚ್ಚಾಗಿದೆ. ಈ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಬಸ್‌ಗಳನ್ನು ರಸ್ತೆಗಿಳಿಸುತ್ತಿರುವ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಬಸ್ ವೇಳಾಪಟ್ಟಿ:
ಕಲಬುರಗಿ–ಮೈಸೂರು ನಾನ್ ಎಸಿ ಸ್ಲೀಪರ್ ಬಸ್ ಪ್ರತಿದಿನ ಸಂಜೆ 6 ಗಂಟೆಗೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು ಶಹಾಪುರ, ಲಿಂಗಸೂರು, ಸಿಂಧನೂರು, ಬಳ್ಳಾರಿ, ಚಳ್ಳಕೆರೆ, ಹಿರಿಯೂರು ಹಾಗೂ ತುರುವೇಕೆರೆ ಮಾರ್ಗವಾಗಿ ಮರುದಿನ ಬೆಳಿಗ್ಗೆ 8 ಗಂಟೆಗೆ ಮೈಸೂರು ತಲುಪಲಿದೆ. ಮೈಸೂರುದಿಂದ ಸಂಜೆ 7 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಿಗ್ಗೆ 9 ಗಂಟೆಗೆ ಕಲಬುರಗಿ ತಲುಪಲಿದೆ.
ಕಲಬುರಗಿ–ಶಿವಮೊಗ್ಗ ಎಸಿ ಸ್ಲೀಪರ್ (ಮಿನಿ ಕಲ್ಯಾಣರಥ) ಬಸ್ ರಾತ್ರಿ 8.30ಕ್ಕೆ ಕಲಬುರಗಿಯಿಂದ ಹೊರಟು ಶಹಾಪುರ, ಲಿಂಗಸೂರು, ಸಿಂಧನೂರು, ಗಂಗಾವತಿ, ಹೊಸಪೇಟೆ, ಕುಡ್ಲಗಿ, ಚಿತ್ರದುರ್ಗ ಹಾಗೂ ಚನ್ನಗಿರಿ ಮಾರ್ಗವಾಗಿ ಬೆಳಿಗ್ಗೆ 7.15ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಸಂಜೆ 7 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಿಗ್ಗೆ 5.45ಕ್ಕೆ ಕಲಬುರಗಿ ತಲುಪಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ವಿಜಯಕುಮಾರ್ ಕಟ್ಟಿಮನಿ, ನಿರ್ಮಲಾ ಬರ್ಗಲಿ, ಸುರೇಶ್ ತಿಬ್ಬಶೆಟ್ಟಿ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ, ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ್ ಕುಮಾರ್, ಮುಖ್ಯ ಭದ್ರತಾ ಅಧಿಕಾರಿ ಎಸ್.ಡಿ. ಗುರಿಕಾರ್, ಸಿಎಂಇ ಸಂತೋಷ್ ಗೊಗೇರಿ, ಮುಖ್ಯ ಹಣಕಾಸು ಅಧಿಕಾರಿ ಬಸವರಾಜ ಬೆಳಗಲಿ, ಮಂಡಳಿ ಕಾರ್ಯದರ್ಶಿ ಜಗದೀಶ ನಾಯಕ್ ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



