ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ; ಶರಣರ ತತ್ವಗಳು ಸಮಾನತೆ ಮತ್ತು ಕಾಯಕ ನಿಷ್ಠೆಯ ದಾರಿದೀಪ: ಶಾಸಕ ಅಲ್ಲಮಪ್ರಭು ಪಾಟೀಲ್
ಹಡಪದ ಅಪ್ಪಣ್ಣನವರ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು; ಶರಣ ಸಂಸ್ಕೃತಿ ಸಮಾಜದ ಪ್ರಗತಿಗೆ ಪ್ರೇರಣೆ ಎಂದು ಅಭಿಮತ

ಕಲಬುರಗಿ, ಜು.29: ಅನಾದಿಕಾಲದಿಂದಲೂ ಹಡಪದ ಸಮಾಜವು ಕಾಯಕ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವಕ್ಕೆ ಹೆಸರಾಗಿದ್ದು, 12ನೇ ಶತಮಾನದ ಸಾಮಾಜಿಕ ಕ್ರಾಂತಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಕೊಡುಗೆ ಅತ್ಯಂತ ಅಮೂಲ್ಯವಾಗಿದೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಹಡಪದ ಸಮಾಜದವರು ತಮ್ಮ ಕಾಯಕದ ಮೂಲಕ ಸಮಾಜದಲ್ಲಿ ಪ್ರಾಮಾಣಿಕತೆ, ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದ್ದಾರೆ ಎಂದು ಶ್ಲಾಘಿಸಿದರು.
ಭಾರತೀಯ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಮೂಲ ತತ್ವಗಳಿಗೆ ಶರಣರ ವಚನಗಳು ಪ್ರೇರಣೆಯಾಗಿವೆ. ‘ಮಾನವ ಕುಲ ಒಂದೇ’ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಶರಣರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಚಿತ್ತಾಪುರ ತಾಲ್ಲೂಕಿನ ಕಂಬಳೇಶ್ವರ ಸಂಸ್ಥಾನ ಮಠದ ಷ.ಬ್ರ. ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದು ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಕಲ್ಯಾಣಕ್ಕೆ ಆಗಮಿಸುವವರು ಮೊದಲು ಹಡಪದ ಅಪ್ಪಣ್ಣನವರ ಅನುಮತಿ ಪಡೆದು ಬಸವಣ್ಣನವರನ್ನು ಭೇಟಿಯಾಗುತ್ತಿದ್ದರು ಎಂದು ಸ್ಮರಿಸಿದರು.
ಹಡಪದ ಅಪ್ಪಣ್ಣನವರು ದೇಹತ್ಯಾಗ ಮಾಡಿ ಸುಮಾರು 900 ವರ್ಷಗಳಾದರೂ ಸಮಾಜ ಇಂದಿಗೂ ಅವರನ್ನು ಗೌರವದಿಂದ ಸ್ಮರಿಸುತ್ತಿದೆ. ರೈತರು ಅನ್ನ ನೀಡಿದರೆ, ಹಡಪದ ಸಮಾಜ ಮನುಷ್ಯನ ವ್ಯಕ್ತಿತ್ವವನ್ನು ಅಂದಗೊಳಿಸುವ ಸೇವೆ ಮಾಡುತ್ತದೆ. ಯುವಕರು ಕಾಯಕಕ್ಕೆ ಗೌರವ ನೀಡಿ ಸಮಾಜದಲ್ಲಿ ಮುನ್ನಡೆಯಬೇಕು ಎಂದು ಅವರು ಹೇಳಿದರು.
ಶಹಾಬಾದ್ನ ಶರಣ ಹಡಪದ ಅಪ್ಪಣ್ಣ ದೇವಸ್ಥಾನದ ಶ್ರೀ ಬಾಲ ಬ್ರಹ್ಮಚಾರಿ ರಾಜ ಶಿವಯೋಗಿಗಳು ಮಾತನಾಡಿ, ಬಸವಣ್ಣನವರ ವಚನದಂತೆ ದಯೆಯೇ ಧರ್ಮದ ಮೂಲವಾಗಿದ್ದು, ಹಡಪದ ಅಪ್ಪಣ್ಣನವರು ದಯೆ, ಸೇವೆ ಮತ್ತು ಪ್ರೀತಿಯ ಪ್ರತಿರೂಪವಾಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಗಪ್ಪ ಗೋಗಿ ಅವರು ಹಡಪದ ಅಪ್ಪಣ್ಣನವರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ‘ಜನಪ್ರಿಯ ಹಡಪದ ಅಪ್ಪಣ್ಣನವರ’ ಜೀವನಚರಿತ್ರೆ ಪುಸ್ತಕವನ್ನು ಬಿಡುಗಡೆ ಮಾಡಿದರು.
ಹಡಪದ ಸಮಾಜದ ಜಿಲ್ಲಾ ಅಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ ಅವರು ಸ್ವಾಗತಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಶಿವಪ್ರಭು ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಗದೀಶ್ವರ ನಾಶಿ, ಶಾಂತಪ್ಪ ಕಟ್ಟಿಮನಿ, ಶಂಕರಪ್ಪ ಹಡಪದ, ರಾಷ್ಟ್ರೀಯ ಬಸವ ದಳದ ಮುಖಂಡರಾದ ಬಸವರಾಜ ಹೊನ್ನಕಿರಣಗಿ, ಬಸವಣ್ಣ ಸೂಗೂರು, ಮಲ್ಲಿಕಾರ್ಜುನ ಸಾವಳಗಿ, ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



