ರಾಜಕೀಯ

ಕಲಬುರಗಿಯಲ್ಲಿ ಡಾ. ವೈಜನಾಥ ಪಾಟೀಲ್ ಜನ್ಮದಿನ ಆಚರಣೆ; ಪ್ರತಿಮೆ ಸ್ಥಾಪನೆಗೆ ಆಗ್ರಹ

371(ಜೆ) ಹೋರಾಟದ ಶಿಲ್ಪಿಗೆ ಗೌರವ ಸಲ್ಲಿಸಬೇಕು; ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮತ್ತಷ್ಟು ಕ್ರಮ ಕೈಗೊಳ್ಳುವಂತೆ ಒತ್ತಾಯ

ಕಲಬುರಗಿ, ಜು.29: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿ ಮುಂಭಾಗದಲ್ಲಿ 371(ಜೆ) ಹೋರಾಟದ ಪ್ರಮುಖ ಶಿಲ್ಪಿ ಡಾ. ವೈಜನಾಥ ಪಾಟೀಲ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಅಹಿಂದ ಚಿಂತಕರ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೈಬಣ್ಣ ಜಮಾದಾರ್ ಆಗ್ರಹಿಸಿದರು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಡಾ. ವೈಜನಾಥ ಪಾಟೀಲ್ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಡಾ. ವೈಜನಾಥ ಪಾಟೀಲ್ ಅವರು ಜೀವನಪರ್ಯಂತ ಹೋರಾಟ ನಡೆಸಿದ್ದರು ಎಂದು ಸ್ಮರಿಸಿದರು.

371(ಜೆ) ಜಾರಿಗೆ ಬರಲು ಸುಮಾರು ಮೂರು ದಶಕಗಳ ಕಾಲ ನಿರಂತರ ಹೋರಾಟ ನಡೆಸಿದ ಪರಿಣಾಮ ಈ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಮೀಸಲಾತಿಯ ಅವಕಾಶ ದೊರೆತಿದ್ದು, ಸರ್ಕಾರಿ ಉದ್ಯೋಗಗಳಲ್ಲಿಯೂ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿವೆ ಎಂದು ಹೇಳಿದರು.

ಡಾ. ವೈಜನಾಥ ಪಾಟೀಲ್ ಅವರು ಅಸಮಾನತೆ ನಿವಾರಣೆಗಾಗಿ ಹೋರಾಡಿದ ಮಹಾನ್ ನಾಯಕರು. ಅವರ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಇಲಾಖೆಯನ್ನು ಕಲಬುರಗಿಯಲ್ಲೇ ಬಲಪಡಿಸಿ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕದ ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ವಿವಿಧ ಸರ್ಕಾರಿ ಇಲಾಖೆಗಳಲ್ಲಿ 371(ಜೆ) ಸೌಲಭ್ಯಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಉದ್ಯೋಗಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಮೇಶ್ ಹಡಪದ್, ಯಶವಂತರಾವ್ ಸೂರ್ಯವಂಶಿ, ವಿಜಯ್ ಜಾಧವ್, ಸಂಜು ಹೊಡಲಕರ, ಪ್ರಕಾಶ್ ಪಟ್ಟೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button