ಜಿಲ್ಲಾಸುದ್ದಿ

ಮಹಿಳೆಯೊಂದಿಗೆ ವಿವಾದ: ರಾಷ್ಟ್ರ ರಕ್ಷಣಾ ಪಡೆಯ ಜವಾಬ್ದಾರಿಯಿಂದ ಹಿಂದೆ ಸರಿದ ಅಮರಾವತಿ

ಸುಳ್ಳು ಆರೋಪ, ಹಣ ವಸೂಲಿ ಹಾಗೂ ಮಾನಹಾನಿ ಯತ್ನ ಆರೋಪ; ತನಿಖೆ ಪೂರ್ಣಗೊಳ್ಳುವವರೆಗೆ ಹುದ್ದೆಯಿಂದ ದೂರವಿರುವುದಾಗಿ ಘೋಷಣೆ

ಕಲಬುರಗಿ, ಜು.29: ಮಹಿಳೆಯೊಂದಿಗಿನ ವೈಯಕ್ತಿಕ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಜವಾಬ್ದಾರಿಯಿಂದ ತಾತ್ಕಾಲಿಕವಾಗಿ ದೂರವಿರುವುದಾಗಿ ಮುಖಂಡ ಮಡಿವಾಳಪ್ಪ ಬಸವರಾಜ ಅಮರಾವತಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬಿಕಾ ಎಂಬ ಮಹಿಳೆ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಹಣ ವಸೂಲಿ ಮಾಡಲು ಯತ್ನಿಸಿದ್ದು, ನಂತರ ತಮ್ಮ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ತಮ್ಮ ಪತ್ನಿಯೂ ಭಾಗಿಯಾಗಿದ್ದಾರೆ ಎಂದು ಹೇಳಿದ ಅವರು, ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗುವವರೆಗೆ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಚಟುವಟಿಕೆಗಳಿಂದ ದೂರವಿರುವುದಾಗಿ ಘೋಷಿಸಿದರು.

ತಮ್ಮ ಪರಿಚಯದ ಮೂಲಕ ಮಹಿಳೆಯೊಂದಿಗೆ ಸಂಪರ್ಕ ಬೆಳೆದಿದ್ದು, ನಂತರ ವಿವಿಧ ಕಾರಣಗಳನ್ನು ಮುಂದಿಟ್ಟು ಹಣ ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ಹಲವು ಬಾರಿ ಹಣ ವರ್ಗಾವಣೆ ಮಾಡಿರುವ ದಾಖಲೆಗಳಿರುವುದಾಗಿ ತಿಳಿಸಿದರು. ಬಳಿಕ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಹಣಕ್ಕಾಗಿ ಒತ್ತಡ ಹೇರಲಾಗಿದೆ ಎಂದು ದೂರಿದರು.

ಇತ್ತೀಚೆಗೆ ನಗರಕ್ಕೆ ಕರೆಸಿ ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಅವರು ಹೇಳಿದರು. ಈ ವೇಳೆ ಉಂಟಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಪ್ರಕರಣ ದಾಖಲಾದ ಬಳಿಕ ತಮ್ಮ ಫೋಟೋ ಹಾಗೂ ಎಫ್‌ಐಆರ್ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಮಾನಹಾನಿಗೆ ಯತ್ನಿಸಲಾಗಿದೆ ಎಂದು ಆರೋಪಿಸಿದ ಅವರು, ಈ ಕುರಿತು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತಮ್ಮ ಮೇಲಿನ ಆರೋಪಗಳು ಸುಳ್ಳು ಎಂದು ಪುನರುಚ್ಚರಿಸಿದ ಅಮರಾವತಿ, ಪ್ರಕರಣದ ಸತ್ಯಾಸತ್ಯತೆ ಹೊರಬರುವವರೆಗೆ ರಾಷ್ಟ್ರ ರಕ್ಷಣಾ ಪಡೆಯ ಜವಾಬ್ದಾರಿಯಿಂದ ದೂರವಿದ್ದು ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button