ಸಾರಿಗೆ

ಆರ್‌ಟಿಒ ಇನ್ಸ್‌ಪೆಕ್ಟರ್ ಮಂಜುನಾಥ್ ಕೊರವಿ ಅಮಾನತಿಗೆ ಆಗ್ರಹಿಸಿ ಟಿಪ್ಪರ್ ಮಾಲೀಕರ ಪ್ರತಿಭಟನೆ

ಅಕ್ರಮ ಹಣ ವಸೂಲಿ, ರಸೀದಿ ನೀಡದಿರುವುದು ಹಾಗೂ ಅವಮಾನಕಾರಿ ವರ್ತನೆ ಆರೋಪ; ಕ್ರಮ ಕೈಗೊಳ್ಳುವಂತೆ ಒತ್ತಾಯ

ಕಲಬುರಗಿ, ಜು.29: ಆರ್‌ಟಿಒ ಇನ್ಸ್‌ಪೆಕ್ಟರ್ ಮಂಜುನಾಥ್ ಕೊರವಿ ಅವರನ್ನು ಅಮಾನತುಗೊಳಿಸಬೇಕು ಅಥವಾ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಟಿಪ್ಪರ್ ಮಾಲೀಕರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಬುಧವಾರ ಸಾರಿಗೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಎದುರು ಟಿಪ್ಪರ್ ಮಾಲೀಕರು ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಡಿ.ಜಿ. ಜಗದೀಶ್, ಗೌರವಾಧ್ಯಕ್ಷ ಶ್ರೀಮಂತ್ ಅಂಜುಲಟಗಿ ಹಾಗೂ ಕಾರ್ಯದರ್ಶಿ ರೇವಯ್ಯಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಟಿಪ್ಪರ್ ಮಾಲೀಕರು, ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ, ಆರ್‌ಟಿಒ ಇನ್ಸ್‌ಪೆಕ್ಟರ್ ಮಂಜುನಾಥ್ ಕೊರವಿ ಅವರು ಟಿಪ್ಪರ್ ವಾಹನಗಳನ್ನು ತಡೆದು ಕಾನೂನುಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದು, ಯಾವುದೇ ಅಧಿಕೃತ ರಸೀದಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೆ, ಟಿಪ್ಪರ್ ಮಾಲೀಕರು ಹಾಗೂ ವಾಹನ ಚಾಲಕರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಕರವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಇಂತಹ ನಡೆಗಳಿಂದ ಟಿಪ್ಪರ್ ಮಾಲೀಕರು ಹಾಗೂ ಚಾಲಕರು ಆರ್ಥಿಕ ಮತ್ತು ಮಾನಸಿಕ ತೊಂದರೆ ಅನುಭವಿಸುತ್ತಿದ್ದು, ಸಾರಿಗೆ ಇಲಾಖೆಯ ಕಾರ್ಯವೈಖರಿ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಆದ್ದರಿಂದ ಮಂಜುನಾಥ್ ಕೊರವಿ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಂಡು ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಅಥವಾ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button