ರಾಜಕೀಯ

ಮೊಗವೀರ, ಬಾರಿಕೆರೆ ಪದಗಳ ಎಸ್‌ಟಿ ಸೇರ್ಪಡೆಗೆ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಕೆಗೆ ಕಮಕ್‌ನೂರ್ ಆಗ್ರಹ

ಕೋಳಿ, ಕಬ್ಬಲಿಗ, ಅಂಬಿಗ, ಬೆಸ್ತ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಈಗಾಗಲೇ ಪ್ರಸ್ತಾವನೆ; ಮೊಗವೀರ, ಬಾರಿಕೆರೆ ಪದಗಳ ಸೇರ್ಪಡೆಗೂ ಒತ್ತಾಯ

ಕಲಬುರಗಿ, ಆ.8: ಕೋಳಿ, ಕಬ್ಬಲಿಗ, ಅಂಬಿಗ ಹಾಗೂ ಬೆಸ್ತ (ಬೆಸ್ತ) ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಮೊಗವೀರ ಮತ್ತು ಬಾರಿಕೆರೆ ಪದಗಳನ್ನೂ ಸೇರಿಸಿ ಕುಲಶಾಸ್ತ್ರೀಯ ಅಧ್ಯಯನ ಕೈಗೊಳ್ಳಲು ಹೆಚ್ಚುವರಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ತಿಪ್ಪಣ್ಣಪ್ಪ ಕಮಕ್‌ನೂರ್ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6ರಂದು ಕೋಳಿ, ಕಬ್ಬಲಿಗ, ಅಂಬಿಗ ಹಾಗೂ ಬೆಸ್ತ ಸಮುದಾಯಗಳ ಅಧ್ಯಯನ ಕೈಗೊಳ್ಳುವಂತೆ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಿಗೆ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಸಂಬಂಧ ₹17.45 ಲಕ್ಷ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಕೋಳಿ, ಕಬ್ಬಲಿಗ, ಅಂಬಿಗ ಹಾಗೂ ಬೆಸ್ತ ಪದಗಳನ್ನು ಮಾತ್ರ ಕುಲಶಾಸ್ತ್ರೀಯ ಅಧ್ಯಯನದಲ್ಲಿ ಅಳವಡಿಸಿ ಅಧ್ಯಯನ ನಡೆಸಲು ಆದೇಶಿಸಲಾಗಿದೆ. ಆದರೆ ಇದೇ ಪರ್ಯಾಯ ಪದಗಳ ವ್ಯಾಪ್ತಿಯಲ್ಲಿ ಮೊಗವೀರ ಮತ್ತು ಬಾರಿಕೆರೆ ಎಂಬ ಪದಗಳನ್ನೂ ಸೇರಿಸಿ ಅಧ್ಯಯನ ನಡೆಸಲು ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಿಗೆ ಹೆಚ್ಚುವರಿ ಪ್ರಸ್ತಾವನೆ ಕಳುಹಿಸಬೇಕು ಎಂದು ಕಮಕ್‌ನೂರ್ ಒತ್ತಾಯಿಸಿದರು.

ತಳವಾರ ಸಮುದಾಯವನ್ನು ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಸೇರ್ಪಡೆಯಾಗಿರುವ ‘ತಳವಾರ’ ಮತ್ತು ಇತರ ಜಾತಿಗಳನ್ನು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ಕೈಬಿಡಲಾಗಿದೆ. 2024ರ ಮಾರ್ಚ್ 20ರಂದು ತಳವಾರ ಮತ್ತು ಪರಿವಾರ ನಾಯಕ್ ಜಾತಿಗಳಿಗೆ ಪರಿಶಿಷ್ಟ ಪಂಗಡದ ಪ್ರಮಾಣಪತ್ರಗಳನ್ನು ವಿತರಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ಸರ್ಕಾರ ನಿರ್ದೇಶನ ನೀಡಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ತಮ್ಮ ರಾಜಕೀಯ ಭವಿಷ್ಯ ಹಾಗೂ ಸಚಿವ ಸ್ಥಾನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕ್‌ನೂರ್, ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದ ವರಿಷ್ಠರು ತಮ್ಮನ್ನು ಆರು ವರ್ಷಗಳ ಪೂರ್ಣಾವಧಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ. ಅದುವೇ ತಮ್ಮ ಪಾಲಿಗೆ ತೃಪ್ತಿ ತಂದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಜಯಕುಮಾರ್ ಹಡಗಲ್, ರಮೇಶ್ ನಾಟೀಕಾರ್, ಕೋಳಿ ನೌಕರರ ಸಂಘದ ಅಧ್ಯಕ್ಷ ನೀಲಕಂಠ ಜಮಾದಾರ್, ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button