ಅಪರಾಧ

ಚೆಂಗಟಾ ಗ್ರಾಮದ ಮನೆಯಲ್ಲಿ ಕಳ್ಳತನ: ಮೂವರು ಆರೋಪಿಗಳ ಬಂಧನ

₹11.71 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಆಯುಧಗಳು ವಶಕ್ಕೆ

ಕಲಬುರಗಿ, ಅ. 23: ರಟಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಗಟಾ ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ಮೋಟಾರ್‌ಸೈಕಲ್ ಹಾಗೂ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಕಾಳಗಿ ನಿವಾಸಿಗಳಾದ ಸೆಂಟ್ರಿಂಗ್ ಕೆಲಸಗಾರ ಶೇರ್ ಅಲಿ (31), ವ್ಯಾಪಾರಿ ಅಬ್ದುಲ್ ವಾಜೀದ್ ಅಲಿಯಾಸ್ ಲದಾಫ್ (22) ಹಾಗೂ ಸೆಂಟ್ರಿಂಗ್ ಕೆಲಸಗಾರ ಇಫಾನ್‌ಸಾಬ್ (30) ಎಂದು ಗುರುತಿಸಲಾಗಿದೆ.

ಚೆಂಗಟಾ ಗ್ರಾಮದ ರವಿಪ್ರಕಾಶ್ ಅವರ ತಂದೆ ಈಶ್ವರ ಹಜೇಪ್ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬ ಸಮೇತರಾಗಿ ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯ ಅಲಮಾರಿಯಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು.

ಕಳೆದ ಆಗಸ್ಟ್ 29ರಂದು ರಾತ್ರಿ ನಡೆದಿದ್ದ ಈ ಕಳ್ಳತನದಲ್ಲಿ ಸುಮಾರು 73 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 380 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಕಳವಾಗಿದ್ದವು. ಕಳವಾದ ಚಿನ್ನಾಭರಣಗಳ ಅಂದಾಜು ಮೌಲ್ಯ ₹10.95 ಲಕ್ಷ ಹಾಗೂ ಬೆಳ್ಳಿ ವಸ್ತುಗಳ ಮೌಲ್ಯ ₹76 ಸಾವಿರ ಎಂದು ತಿಳಿಸಲಾಗಿತ್ತು. ಒಟ್ಟು ₹11.71 ಲಕ್ಷ ಮೌಲ್ಯದ ಆಭರಣಗಳು ಕಳವಾಗಿರುವ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 33 ಗ್ರಾಂ ತೂಕದ ಚಿನ್ನ ಹಾಗೂ 30 ಗ್ರಾಂ ತೂಕದ ಬೆಳ್ಳಿ ಆಭರಣಗಳು, ಮೋಟಾರ್‌ಸೈಕಲ್ ಮತ್ತು ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಅಧಿಕಾರಿಗಳಾದ ಕೃಷ್ಣಕುಮಾರ್, ಶೀಲಾದೇವಿ, ಶಿವಶಂಕರ ಸುಬೇದಾರ್, ಶ್ರೀಮಂತ, ನಟರಾಜ್, ವಸಂತ, ಮೋಹನರೆಡ್ಡಿ, ಸುನೀಲಕುಮಾರ್, ಶಿವರಾಮ್, ರೇವಣಸಿದ್ಧಪ್ಪ, ಆನಂದ್ ಹಾಗೂ ಆಕಾಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button