ಬೆಳೆಗಳ ರಕ್ಷಣೆಗೆ ಚಂದ್ರಂಪಳ್ಳಿ ಜಲಾಶಯದಿಂದ ನೀರು ಹರಿಸಲು ದೀಪಕನಾಗ್ ಪುಣ್ಯಶೆಟ್ಟಿ ಆಗ್ರಹ
ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಒಂದು ತಿಂಗಳ ಕಾಲ ನೀರು ಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ

ಕಲಬುರಗಿ, ಅ. ೨೩: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಸುಮಾರು ಒಂದು ತಿಂಗಳ ಕಾಲ ಹರಿಸಿ, ಒಣಗುವ ಹಂತ ತಲುಪಿರುವ ರೈತರ ಬೆಳೆಗಳನ್ನು ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದೀಪಕನಾಗ್ ಎಸ್. ಪುಣ್ಯಶೆಟ್ಟಿ ಆಗ್ರಹಿಸಿದ್ದಾರೆ.
ಈ ಕುರಿತು ರೈತರೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಪ್ರಸಕ್ತ ಮಳೆಗಾಲದಲ್ಲಿ ಉತ್ತಮ ಮಳೆಯಾಗಿರುವುದರಿಂದ ಚಂದ್ರಂಪಳ್ಳಿ ಜಲಾಶಯದಲ್ಲಿ ಸುಮಾರು ಶೇ ೮೦ರಿಂದ ೯೦ರಷ್ಟು ನೀರು ಸಂಗ್ರಹವಾಗಿದೆ. ಆದರೆ ಜಲಾಶಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡು-ಮೂರು ತಿಂಗಳಿಂದ ಸಮರ್ಪಕ ಮಳೆಯಾಗದ ಕಾರಣ ಬೆಳೆಗಳು ಒಣಗುವ ಹಂತ ತಲುಪಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಚಿಂಚೋಳಿ ತಾಲ್ಲೂಕಿನ ಐನೊಳ್ಳಿ, ಚಂದ್ರಂಪಳ್ಳಿ, ಕೊಳ್ಳೂರು, ಫತ್ತೇಪುರ, ದೇಗುಲಮಡಿ, ಪೊಲಕಪಳ್ಳಿ, ಚಿಂಚೋಳಿ ಹಾಗೂ ಪಟ್ಟಪಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕೃಷಿ ಜಮೀನುಗಳಿಗೆ ತುರ್ತಾಗಿ ನೀರಿನ ಅಗತ್ಯವಿದೆ. ಜಲಾಶಯದಲ್ಲಿ ಲಭ್ಯವಿರುವ ನೀರನ್ನು ನಿಯಮಾನುಸಾರ ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಹರಿಸಿದರೆ ಒಣಗುತ್ತಿರುವ ಬೆಳೆಗಳನ್ನು ಉಳಿಸಬಹುದು. ಇದರಿಂದ ರೈತರ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ನೀರಿನ ಕೊರತೆಯಿಂದ ಈ ಭಾಗದಲ್ಲಿ ಜಾನುವಾರುಗಳು, ಪಕ್ಷಿಗಳು ಹಾಗೂ ವನ್ಯಜೀವಿಗಳೂ ತೊಂದರೆ ಅನುಭವಿಸುತ್ತಿವೆ. ಕಾಲುವೆಗಳ ಮೂಲಕ ನೀರು ಹರಿಸುವುದರಿಂದ ಕೃಷಿಗೆ ಅನುಕೂಲವಾಗುವುದರ ಜತೆಗೆ ಪ್ರಾಣಿ-ಪಕ್ಷಿಗಳಿಗೆ ನೀರಿನ ಲಭ್ಯತೆ ಹೆಚ್ಚಿಸಲು ಹಾಗೂ ಪರಿಸರ ಸಮತೋಲನ ಕಾಪಾಡಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಮತ್ತು ಬರದಂತಹ ಪರಿಸ್ಥಿತಿಯಿಂದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಚಂದ್ರಂಪಳ್ಳಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ವೈಜ್ಞಾನಿಕವಾಗಿ ಹಾಗೂ ನಿಯಮಾನುಸಾರ ಬಳಸಿಕೊಂಡು ಬೆಳೆಗಳನ್ನು ರಕ್ಷಿಸುವುದು ಅಗತ್ಯವಾಗಿದೆ ಎಂದು ದೀಪಕನಾಗ್ ಪುಣ್ಯಶೆಟ್ಟಿ ಪ್ರತಿಪಾದಿಸಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಿ, ಚಂದ್ರಂಪಳ್ಳಿ ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಸುಮಾರು ಒಂದು ತಿಂಗಳ ಕಾಲ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಮನವಿಯನ್ನು ಐನೊಳ್ಳಿ, ಚಂದ್ರಂಪಳ್ಳಿ, ಕೊಳ್ಳೂರು, ಫತ್ತೇಪುರ, ದೇಗುಲಮಡಿ, ಪೊಲಕಪಳ್ಳಿ, ಚಿಂಚೋಳಿ ಹಾಗೂ ಪಟ್ಟಪಳ್ಳಿ ಭಾಗದ ರೈತರು ಮತ್ತು ಗ್ರಾಮಸ್ಥರ ಹಿತದೃಷ್ಟಿಯಿಂದ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಚಂದ್ರಶೆಟ್ಟಿ ಕನ್ನಾ, ಮಶಾಕಲಪತಿ, ರಾಜಕುಮಾರ ಮಂದ, ವೀರರೆಡ್ಡಿ ಯಲಮೋರ್, ಕಲ್ಯಾಣರಾವ್ ತುಮನಂಪಳ್ಳಿ, ಮಲ್ಲಪ್ಪ ನಾಟಿಕರ್, ಬಸವರಾಜ್ ಮಂದಾ, ಸಂಜುಕುಮಾರ ಕನ್ನಾ, ನಾಗೇಶ್ ಮಾಲಿ ಪಾಟೀಲ್, ಮಲ್ಲಣ್ಣ ಗೌನಳ್ಳಿ, ಶಿವಕುಮಾರ ಮೂಳಿಗೆ, ಬಸವರಾಜ ಮುಗುಡಂಪಳ್ಳಿ, ನಾಗಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.