ದಸರಾ ಪೂಜಾ ಉತ್ಸವದಲ್ಲಿ ಸಪ್ತ ನೇಕಾರ ಸೇವಾ ಸಂಘದ ನೂತನ ನಾಮಫಲಕ ಅನಾವರಣ
ನೇಕಾರ ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಲು ಮುಖಂಡರ ಕರೆ

ಕಲಬುರಗಿ, ಅ. ೨೩: ನಗರದ ಸಪ್ತ ನೇಕಾರ ಸೇವಾ ಸಂಘದ ವತಿಯಿಂದ ದಸರಾ ಪೂಜಾ ಉತ್ಸವ ಹಾಗೂ ಸಂಘದ ನೂತನ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಸಂತೋಷಕುಮಾರ ಕುಸಾಮಾ ಅವರು ಶಕ್ತಿದೇವತೆ ಮಹಾಮಾತೆ (ಅಂಬಾ ಭವಾನಿ) ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಡಾ. ಕಿರಣ್ ದೇಶಮುಖ್ ಅವರು ಸಂಘದ ನೂತನ ನಾಮಫಲಕವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಇಬ್ಬರೂ ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನೇಕಾರ ಸಮುದಾಯದ ಪ್ರತಿನಿಧಿತ್ವ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸಮುದಾಯ ತನ್ನದೇ ಆದ ಛಾಪು ಮೂಡಿಸುವಂತಾಗಲಿ ಎಂದು ಗಣ್ಯರು ಆಶಿಸಿದರು.
ಡಾ. ಕಿರಣ್ ದೇಶಮುಖ್ ಮಾತನಾಡಿ, ಕೈಮಗ್ಗ ಉದ್ಯಮ ಕ್ರಮೇಣ ನಶಿಸುತ್ತಿರುವ ಇಂದಿನ ಸಂದರ್ಭದಲ್ಲಿ ನೇಕಾರಿಕೆ ಹಾಗೂ ಅದರ ಅಸ್ಮಿತೆಯನ್ನು ಸಮುದಾಯದಲ್ಲಿ ಸದಾ ಜಾಗೃತವಾಗಿರಿಸುವ ಸಪ್ತ ನೇಕಾರ ಸೇವಾ ಸಂಘದ ಕಾರ್ಯ ಶ್ಲಾಘನೀಯವಾಗಿದೆ. ಸಂಘವು ಇನ್ನಷ್ಟು ಉನ್ನತ ಸ್ಥಾನಕ್ಕೇರಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನೇಕಾರ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ನೇಕಾರ ಸಮುದಾಯದ ನಿಗಮ ಸ್ಥಾಪನೆ ಹಾಗೂ ಕಲಬುರಗಿ ಮಹಾನಗರದಲ್ಲಿ ಪ್ರಧಾನಮಂತ್ರಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದ ಪ್ರಯತ್ನಗಳಿಗೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲಪೂರ ಅವರು ಸ್ವಾಗತಿಸಿದರು. ನ್ಯಾಯವಾದಿ ಜನವೇರಿ ವಿನೋದಕುಮಾರ ಅವರು ಕಾರ್ಯಕ್ರಮ ನಿರೂಪಣೆ ಹಾಗೂ ಪ್ರಸ್ತಾವನೆ ನೆರವೇರಿಸಿದರು. ಸಂಘದ ಕಾರ್ಯದರ್ಶಿ ಮಾಳಗಿ ಚಂದ್ರಶೇಖರ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾಗಲು ಆಸಕ್ತರಿಗೆ ಆಹ್ವಾನ ನೀಡಲಾಯಿತು. ಅಧಿಕೃತವಾಗಿ ಸದಸ್ಯರಾಗಲು ಬಯಸುವವರು ಸಂಘಕ್ಕೆ ₹೧,೧೨೧ ಪಾವತಿಸಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗರಾಜ್ ಕುಸಾಮಾ, ಮಲ್ಲಿನಾಥ ಕುಂಟೋಜಿ, ಡಾ. ಬಸವರಾಜ್ ಚನ್ನಾ, ವೀರಭಸವಂತಪ್ಪ ಬುಳ್ಳ, ರಾಜಶೇಖರ ಘಶನೆ, ಶರಣಕುಮಾರ ಮುನೊಳ್ಳಿ, ರೇವಣಸಿದ್ಧಪ್ಪ ಗಡ್ಡದ, ಶಿವಚೆಲ್ಲಪ್ಪ ಪುರವಂತ, ನಿಂಬೆನೆಪ್ಪ ಸಾಹುಕಾರ ಮಂಗಲಗಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಪ್ತ ಸಮಾಜದ ಬಂಧುಗಳು ಭಾಗವಹಿಸಿದ್ದರು.



