
ಕಲಬುರಗಿ, ಸೆ.28: ಬಸವಾದಿ ಶಿವಶರಣರ ಹೆಸರಿನಲ್ಲಿ ನಡೆಯುತ್ತಿರುವ ಹಿಂದೂ ಸಮಾವೇಶವನ್ನು ವಿರೋಧಿಸುತ್ತಿರುವ ಕಮ್ಯುನಿಸ್ಟ್ವಾದಿಗಳು ಹಾಗೂ ಕಮ್ಯುನಿಸ್ಟ್ವಾದಿ ಸ್ವಾಮೀಜಿಗಳ ವಿರುದ್ಧ ಮಹಾರಾಷ್ಟ್ರದ ಕೊಲ್ಲಾಪುರದ ಕನ್ನೇರಿ (ಸಿದ್ಧಗಿರಿ) ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ನೂತನ ವಿದ್ಯಾಲಯದ ಮೈದಾನದಲ್ಲಿ ಭಾನುವಾರ ನಡೆದ ಬೃಹತ್ ಹಿಂದೂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ಸಿದ್ಧರಾಗಲು ಅನುಕೂಲವಾಗುವಂತೆ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಶೀಘ್ರವೇ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಘೋಷಿಸಿದರು.
ಆರಂಭದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ, ನಂತರ ಮತ್ತೊಂದು ಸಾವಿರ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ತರಬೇತಿ ಕೇಂದ್ರ ಆರಂಭಿಸಲು ಸುಮಾರು ₹150 ಕೋಟಿ ಅಗತ್ಯವಿದ್ದು, ಆ ಹಣ ಹೊಂದಿಸುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಶಾಸಕರು ಹಾಗೂ ಮಾಜಿ ಶಾಸಕರೂ ಸಹ ನೆರವು ನೀಡಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ದೆಹಲಿ ಸೇರಿದಂತೆ ಪ್ರಮುಖ ನಗರಗಳಿಗೆ ತೆರಳಿ ತರಬೇತಿ ಪಡೆಯಲು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಇದರಿಂದಾಗಿ ಕಲಬುರಗಿಯಲ್ಲೇ ತರಬೇತಿ ಕೇಂದ್ರ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಶ್ರೀಮಂತ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹40 ಸಾವಿರ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ₹25 ಸಾವಿರ ಶುಲ್ಕ ನಿಗದಿಪಡಿಸಲಾಗುವುದು. ಬಡ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಕೇವಲ ₹1 ಶುಲ್ಕದಲ್ಲಿ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ಗುರುಕುಲ ಮಾದರಿಯ ಶಿಕ್ಷಣಕ್ಕೆ ಒತ್ತು
ತರಬೇತಿ ಕೇಂದ್ರದಲ್ಲಿ ಕೇವಲ ಪರೀಕ್ಷಾ ಸಿದ್ಧತೆಗೆ ಮಾತ್ರ ಒತ್ತು ನೀಡದೆ ಭಾರತೀಯ ಸಂಸ್ಕೃತಿ, ನೈತಿಕ ಮೌಲ್ಯಗಳು ಹಾಗೂ ಶಿಸ್ತನ್ನು ಒಳಗೊಂಡ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ರೂಪಿಸಲಾಗುವುದು. ಸುಸಜ್ಜಿತ ಡಿಜಿಟಲ್ ಗ್ರಂಥಾಲಯ, ಪರಿಣಿತ ಉಪನ್ಯಾಸಕರಿಂದ ತರಗತಿಗಳು ಹಾಗೂ ಸ್ವಯಂ ಅಧ್ಯಯನಕ್ಕೆ ಅಗತ್ಯವಾದ ಕೊಠಡಿಗಳನ್ನು ಒದಗಿಸಲಾಗುವುದು ಎಂದು ಸಿದ್ಧಗಿರಿ ಶ್ರೀಗಳು ವಿವರಿಸಿದರು.
ಬಸವಾದಿ ಶಿವಶರಣರ ಹೆಸರಿನಲ್ಲಿ ನಡೆಯುವ ಹಿಂದೂ ಸಮಾವೇಶವನ್ನು ವಿರೋಧಿಸುವವರ ವಿರುದ್ಧವೂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಠಗಳಲ್ಲಿ ಪೂಜೆ ಮಾಡುವ ಕೆಲವರು ಹೊರಗೆ ಬಂದು ದೇವರೇ ಇಲ್ಲ ಎಂಬ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಕಮ್ಯುನಿಸ್ಟ್ವಾದಿಗಳು ಕಳೆದ ಹಲವು ದಶಕಗಳಲ್ಲಿ ಕೋಟ್ಯಂತರ ಜನರ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪವನ್ನು ಮಾಡಿದ ಅವರು, ಬಸವಣ್ಣನವರ ಹೆಸರನ್ನು ಬಳಸಿಕೊಂಡು ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಯಬಾರದು ಎಂದು ಹೇಳಿದರು.
ಬಸವಣ್ಣನ ವಚನಗಳ ಪ್ರಚಾರಕ್ಕೆ ಕರೆ
ಬಸವಣ್ಣನವರ ಬಗ್ಗೆ ನಿಜವಾದ ಗೌರವವಿದ್ದರೆ ಅವರ ವಚನಗಳನ್ನು ಮಸೀದಿಗಳಲ್ಲಿಯೂ ಪ್ರಚಾರ ಮಾಡಬೇಕು ಎಂದು ಸವಾಲು ಹಾಕಿದ ಶ್ರೀಗಳು, ಲಿಂಗಾಯತ ಧರ್ಮದ ಮೇಲೆ ನಂಬಿಕೆ ಇರುವವರು ಲಿಂಗಾಯತ ಧರ್ಮಕ್ಕೆ ಸೇರಬೇಕು ಎಂದು ಹೇಳಿದರು.
ಕೆಲವು ಸ್ವಾಮೀಜಿಗಳು ತಮ್ಮ ಮಠಗಳಿಂದ ಕುರಾನ್ ಕುರಿತು ಪುಸ್ತಕಗಳನ್ನು ಪ್ರಕಟಿಸಿರುವುದನ್ನೂ ಉಲ್ಲೇಖಿಸಿದ ಅವರು, ಬಸವಣ್ಣನವರ ವಚನಗಳ ಬಗ್ಗೆ ಗೌರವವಿದ್ದರೆ ಅವುಗಳನ್ನು ಎಲ್ಲೆಡೆ ಪ್ರಚಾರ ಮಾಡಬೇಕು ಎಂದು ಹೇಳಿದರು.
ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ವಿರೋಧಿಸಿದ ನೀಲವ್ವ, ಬಾಲವ್ವ ಸೇರಿದಂತೆ ಕೆಲವರನ್ನು ಹೆಸರಿಸದೆ ಟೀಕಿಸಿದ ಅವರು, ಕಮ್ಯುನಿಸ್ಟ್ವಾದಿಗಳಿಗೂ ಬಸವಣ್ಣನವರ ಕಾಯಕ ಸಂಸ್ಕೃತಿಗೂ ಯಾವುದೇ ರೀತಿಯ ಹೊಂದಾಣಿಕೆ ಇಲ್ಲ ಎಂದು ಹೇಳಿದರು. ಕಾಯಕ ಮತ್ತು ದಾಸೋಹದ ಬದಲು ಕಾರ್ಮಿಕ ವರ್ಗವನ್ನು ಸಂಘಟಿಸಿ ಹೋರಾಟ ಹಾಗೂ ಬಂದ್ಗಳಿಗೆ ಪ್ರಚೋದಿಸಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದರು.
ಧರ್ಮಗಳ ನಡುವೆ ಹೋಲಿಕೆ ಸರಿಯಲ್ಲ
ಲಿಂಗಾಯತ ಧರ್ಮಕ್ಕೂ ಮುಸ್ಲಿಂ ಧರ್ಮಕ್ಕೂ ಹೋಲಿಕೆ ಇದೆ ಎಂಬ ರೀತಿಯ ಹೇಳಿಕೆಗಳನ್ನು ಕೆಲವರು ನೀಡುತ್ತಿದ್ದಾರೆ ಎಂದು ಉಲ್ಲೇಖಿಸಿದ ಶ್ರೀಗಳು, ಎರಡೂ ಧರ್ಮಗಳ ನಡುವೆ ಯಾವುದೇ ಹೋಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಂಗಾಯಣ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಪ್ರೊ. ಆರ್.ಕೆ. ಹುಡಗಿ ಅವರು ನಡೆಸಿದ ಸತ್ಯಾಗ್ರಹವನ್ನು ಉಲ್ಲೇಖಿಸಿದ ಅವರು, ಹಿಂದೂ ಸಮಾವೇಶವನ್ನು ವಿರೋಧಿಸುತ್ತಿರುವ ಕಮ್ಯುನಿಸ್ಟ್ವಾದಿಗಳ ಹಿಂದಿರುವ ಬಂಡವಾಳದ ಕುರಿತು ದಾಖಲೆಗಳ ಸಹಿತ ಮಾಹಿತಿ ಬಿಡುಗಡೆ ಮಾಡುವುದಾಗಿ ಹೇಳಿದರು.
ಸಾಣೇಹಳ್ಳಿ ಶ್ರೀಗಳ ವಿರುದ್ಧದ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾಟಕದ ಹೆಸರಿನಲ್ಲಿ ₹3 ಕೋಟಿ ಅನುದಾನ ಪಡೆದಿರುವ ಕುರಿತು ಪ್ರಶ್ನಿಸಿದರು. ತಮ್ಮ ವಿರುದ್ಧ ವಿವಿಧ ಮಠಗಳ ಶ್ರೀಗಳು ಕೈಗೊಂಡಿದ್ದ ಕ್ರಮಗಳನ್ನೂ ಪ್ರಸ್ತಾಪಿಸಿದ ಅವರು, ತಮಗೆ ಮಾತನಾಡದಂತೆ ನಿರ್ಬಂಧ ಹೇರಲಾಗಿತ್ತು ಎಂದು ಹೇಳಿದರು.
ವಿಭೂತಿ ಧರಿಸುವ ಕುರಿತು ವ್ಯಂಗ್ಯ
ತಾವು ಕುಂಕುಮ ಹಚ್ಚುವುದಿಲ್ಲ, ವಿಭೂತಿ ಹಚ್ಚಿಕೊಳ್ಳುವುದಿಲ್ಲ ಎಂದು ಡಾ. ಮೀನಾಕ್ಷಿ ಬಾಳಿ ಟೀಕಿಸಿರುವುದನ್ನು ಉಲ್ಲೇಖಿಸಿದ ಶ್ರೀಗಳು, ತಮ್ಮ ಪತಿಯ ಕೊರಳಿಗೆ ತಾಳಿ ಕಟ್ಟುವ ವಿಚಾರದಲ್ಲಿಯೂ ಸಮಾನತೆಯ ಪ್ರಶ್ನೆ ಎತ್ತುವ ಮೂಲಕ ವ್ಯಂಗ್ಯವಾಡಿದರು.
ಕನ್ನೇರಿ ಮಠದಲ್ಲಿ ವಿಭೂತಿ ತಯಾರಿಸಲಾಗುತ್ತದೆ. ಬಸವಣ್ಣನವರ ಕಾಯಕ-ದಾಸೋಹದ ಪರಂಪರೆಯಂತೆ ಮಠ ಕಾರ್ಯನಿರ್ವಹಿಸುತ್ತಿದೆ. ತಮ್ಮನ್ನು ವಿರೋಧಿಸುವ ಕಮ್ಯುನಿಸ್ಟ್ವಾದಿಗಳು ಮಠಕ್ಕೆ ಭೇಟಿ ನೀಡಿದರೆ ಎರಡು ಗಂಟೆಗಳಲ್ಲಿ ಹಿಂದೂ ಧರ್ಮದ ಬಗ್ಗೆ ನಂಬಿಕೆ ಮೂಡುವಂತೆ ಮಾಡುವುದಾಗಿ ಅವರು ಸವಾಲು ಹಾಕಿದರು.
ಹಿಂದೂ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದ್ದು, ಇದಕ್ಕೆ ಶಾಸಕರು ಹಾಗೂ ಮಾಜಿ ಶಾಸಕರ ಸಹಕಾರವೂ ಕಾರಣವಾಗಿದೆ ಎಂದು ಅವರು ಹೇಳಿದರು. ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳಿಂದ ಸೋತವರು ಈ ಬಾರಿ ಸಂಘಟಿತರಾಗಿ ಕಾರ್ಯನಿರ್ವಹಿಸಿದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಹೇಳಿದರು.
ಪೊಲೀಸರ ಕಾರ್ಯಕ್ಕೆ ಶ್ಲಾಘನೆ
ಸಮಾವೇಶದ ಸಂದರ್ಭದಲ್ಲಿ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದ ಶ್ರೀಗಳು, ಪೊಲೀಸರನ್ನು ಪ್ರಶಂಸಿಸಿದರೆ ರಾಜ್ಯ ಸರ್ಕಾರ ತಮಗೆ ತೊಂದರೆ ನೀಡಬಹುದು ಎಂಬ ಭಯವಿದೆ. ಆದ್ದರಿಂದ ಅವರನ್ನು ಬಹಿರಂಗವಾಗಿ ಹೊಗಳಲು ಸಾಧ್ಯವಿಲ್ಲ ಎಂದು ಹೇಳಿದರು.
ಬೀದರ್ನ ಅದಂಬರಾಶ್ರಮದ ಶಿವಕುಮಾರ ಸ್ವಾಮೀಜಿ, ಕಡಗಂಚಿ ಮಠದ ಶ್ರೀಗಳು, ಗದಗಿನ ಮಾತೋಶ್ರೀ, ರಾಜಕುಮಾರ ದೇವರು ಸೇರಿದಂತೆ ಹಲವು ಗಣ್ಯರು ಮಾತನಾಡಿದರು. ಪ್ರಣವಾನಂದ ಸ್ವಾಮೀಜಿ, ಹವಾ ಮಲ್ಲಿನಾಥ ಮಹಾರಾಜರು ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಸ್ವಾಮೀಜಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ, ಶಾಸಕರಾದ ಡಾ. ಬಿ.ಜಿ. ಪಾಟೀಲ, ಬಸವರಾಜ ಮತ್ತಿಮೂಡ, ಡಾ. ಅವಿನಾಶ ಜಾಧವ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಮುಖಂಡರಾದ ಶಿವರಾಜ ಪಾಟೀಲ ರದ್ದೇವಾಡಗಿ, ಹರ್ಷಾನಂದ ಗುತೇದಾರ, ನಿತಿನ್ ಗುತೇದಾರ, ಮಾಜಿ ಸಂಸದ ಡಾ. ಉಮೇಶ್ ಜಾಧವ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



