ಕಲಬುರಗಿಯಲ್ಲಿ ಪ್ರಜಾಸೇವಾ ಸೌಧ ನಿರ್ಮಿಸಿ ಮಳೆಗಾಲದ ಅಧಿವೇಶನ ನಡೆಸಲು ದೀಪಕನಾಗ ಪೂಣ್ಯಶೆಟ್ಟಿ ಆಗ್ರಹ
ಕಲ್ಯಾಣ ಕರ್ನಾಟಕವನ್ನು ಪ್ರಾದೇಶಿಕ ಆಡಳಿತ ಕೇಂದ್ರವಾಗಿ ಅಭಿವೃದ್ಧಿಪಡಿಸಿ: ದೀಪಕನಾಗ ಪೂಣ್ಯಶೆಟ್ಟಿ

ಕಲಬುರಗಿ, ಸೆ.28: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ವಿಕೇಂದ್ರೀಕರಣದ ದೃಷ್ಟಿಯಿಂದ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಜಾಸೇವಾ ಸೌಧ ನಿರ್ಮಿಸಿ, ಪ್ರತಿ ವರ್ಷ ವಿಧಾನಮಂಡಲದ ಮಳೆಗಾಲದ ಅಧಿವೇಶನವನ್ನು ಇಲ್ಲಿ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕನಾಗ ಪೂಣ್ಯಶೆಟ್ಟಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಮುಂದಿನ ಪೀಳಿಗೆಯ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮನವಿಯನ್ನು ಸರ್ಕಾರ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಘೋಷಿಸಿರುವ 10 ಅಭಿವೃದ್ಧಿ ಮಿಷನ್‌ಗಳ ಜೊತೆಗೆ ಈ ಭಾಗದ ಅಭಿವೃದ್ಧಿಗೆ ಇನ್ನೂ ಎರಡು ಮಹತ್ವದ ಮಿಷನ್‌ಗಳನ್ನು ಸೇರ್ಪಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ನೀತಿ ಆಯೋಗದ ಶಿಫಾರಸಿನಂತೆ ಎರಡನೇ ಬೆಂಗಳೂರು ಪರಿಕಲ್ಪನೆಯಡಿ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿಯನ್ನು ಪ್ರಾದೇಶಿಕ ಉಪರಾಜಧಾನಿ ಅಥವಾ ದ್ವಿತೀಯ ಆಡಳಿತ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕಲಬುರಗಿಯಲ್ಲಿ ವಿಧಾನಮಂಡಲದ ಅಧಿವೇಶನಕ್ಕೆ ಆಗ್ರಹ
ರಾಜ್ಯದ ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಪ್ರತಿವರ್ಷ ನಡೆಯುವ ವಿಧಾನಮಂಡಲದ ಬಜೆಟ್ ಅಧಿವೇಶನದ ಮಾದರಿಯಲ್ಲಿ, ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆಯ ಸುವರ್ಣಸೌಧದಲ್ಲಿ ನಡೆಯುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ‘ಕಲ್ಯಾಣ ಕರ್ನಾಟಕ ಪ್ರಜಾಸೇವಾ ಸೌಧ’ ನಿರ್ಮಿಸಬೇಕು ಎಂದು ದೀಪಕನಾಗ ಪೂಣ್ಯಶೆಟ್ಟಿ ಹೇಳಿದರು.
ಈ ಸೌಧದಲ್ಲಿ ಪ್ರತಿ ವರ್ಷ ವಿಧಾನಮಂಡಲದ ಮಳೆಗಾಲದ ಅಧಿವೇಶನ ನಡೆಸುವ ಮೂಲಕ ಆಡಳಿತಾತ್ಮಕ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಬೇಕು. ಇದರಿಂದ ಕಲ್ಯಾಣ ಕರ್ನಾಟಕದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ನೇರವಾಗಿ ತರುವುದರ ಜೊತೆಗೆ ಈ ಭಾಗದ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಭಿವೃದ್ಧಿ ಮಿಷನ್‌ಗಳ ಅನುಷ್ಠಾನಕ್ಕೆ ಒತ್ತು
ಕಲ್ಯಾಣ ಕರ್ನಾಟಕ ಏಕೀಕೃತ ಮಿಷನ್, ಜೈವಿಕ ಆರ್ಥಿಕ ಮಿಷನ್, ರಕ್ತಹೀನತೆ ಮುಕ್ತ ಕಲ್ಯಾಣ ಕರ್ನಾಟಕ ಅಭಿಯಾನ, ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ, ನಿವೇಶನರಹಿತ ಕುಟುಂಬಗಳಿಗೆ 50 ಸಾವಿರ ನಿವೇಶನ, ಜವಳಿ ಪಾರ್ಕ್ ಹಾಗೂ ಪ್ರವಾಸೋದ್ಯಮ ಮತ್ತು ಪಾರಂಪರಿಕ ತಾಣಗಳ ಅಭಿವೃದ್ಧಿ, ಅಂತಾರಾಷ್ಟ್ರೀಯ ಕ್ರೀಡಾ ನಗರ ಹಾಗೂ ಕಲ್ಯಾಣ ಕರ್ನಾಟಕದಲ್ಲಿ 10 ಕೋಟಿ ಸಸಿ ನೆಡುವ ಅಭಿಯಾನ ಸೇರಿದಂತೆ ಮುಖ್ಯಮಂತ್ರಿ ಘೋಷಿಸಿರುವ ಅಭಿವೃದ್ಧಿ ಮಿಷನ್‌ಗಳನ್ನು ಸ್ವಾಗತಿಸುವುದಾಗಿ ಅವರು ಹೇಳಿದರು.
ಈ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ದೀರ್ಘಕಾಲೀನ ಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಪಾಟೀಲ, ಕಾಂಗ್ರೆಸ್ ಮುಖಂಡರಾದ ಗುರುಶರಣ ಪಾಟೀಲ ಕೊರಳ್ಳಿ, ಸಕ್ರೆಪ್ಪಗೌಡ ಪಾಟೀಲ ಕೋಳಕೂರ, ವಿಜಯಕುಮಾರ ಪಾಟೀಲ, ಬಸವರಾಜ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



