ಸಾರಿಗೆ ಸಿಬ್ಬಂದಿಯ ಪ್ರಾಮಾಣಿಕತೆ: ಕಳೆದುಹೋದ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರ
ಪ್ರಯಾಣಿಕರು ಬಸ್‌ನಲ್ಲಿ ಮರೆತುಹೋದ ಬೆಳ್ಳಿ, ಚಿನ್ನದ ಆಭರಣಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಚಾಲಕ ಮತ್ತು ನಿರ್ವಾಹಕ

ಅಫಜಲಪುರ, ಅ. ೨೩: ಸಾರಿಗೆ ಬಸ್‌ನಲ್ಲಿ ಪ್ರಯಾಣಿಕರು ಮರೆತು ಬಿಟ್ಟುಹೋಗಿದ್ದ ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಸಾರಿಗೆ ಬಸ್‌ನ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಅಫಜಲಪುರ ಘಟಕಕ್ಕೆ ಸೇರಿದ ಸಾರಿಗೆ ಬಸ್ ಅರ್ಜುಣಗಿ ಬಸ್ ನಿಲ್ದಾಣಕ್ಕೆ ತಲುಪಿದ ಸಂದರ್ಭದಲ್ಲಿ, ಪ್ರಯಾಣಿಕರೊಬ್ಬರು ಬಸ್‌ನಲ್ಲಿಯೇ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಮರೆತು ಬಿಟ್ಟುಹೋಗಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿ ಆಭರಣಗಳನ್ನು ಸುರಕ್ಷಿತವಾಗಿ ಇರಿಸಿಕೊಂಡು, ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದ್ದಾರೆ.
ನಂತರ ಸಂಬಂಧಪಟ್ಟ ವಾರಸುದಾರರನ್ನು ಗುರುತಿಸಿ, ಯಾವುದೇ ವಸ್ತುಗಳ ಕೊರತೆಯಾಗದಂತೆ ಆಭರಣಗಳನ್ನು ಯಥಾವತ್ತಾಗಿ ಹಸ್ತಾಂತರಿಸಿದ್ದಾರೆ. ಬೆಲೆಬಾಳುವ ಆಭರಣಗಳು ಸಿಕ್ಕರೂ ಅವುಗಳನ್ನು ತಮ್ಮ ಸ್ವಂತದ್ದೆಂದು ಪರಿಗಣಿಸದೆ, ನಿಜವಾದ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಸಾರಿಗೆ ಸಿಬ್ಬಂದಿ ಮಾನವೀಯತೆ ಮತ್ತು ಪ್ರಾಮಾಣಿಕತೆಗೆ ಉತ್ತಮ ಉದಾಹರಣೆಯಾಗಿದ್ದಾರೆ.
ಈ ಪ್ರಾಮಾಣಿಕ ಕಾರ್ಯದಲ್ಲಿ ಪಾಲ್ಗೊಂಡ ಚಾಲಕ ಮೌನೇಶ ಸುತಾರ ಹಾಗೂ ನಿರ್ವಾಹಕ ಮಾಳಪ್ಪ ಪೂಜಾರಿ ಅವರ ಕರ್ತವ್ಯಪ್ರಜ್ಞೆ ಮತ್ತು ಪ್ರಾಮಾಣಿಕ ಸೇವೆಯನ್ನು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಮೆಚ್ಚಿ, ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.



