ಜಿಲ್ಲಾಸುದ್ದಿಧಾರ್ಮಿಕ

ಕೋಟಗ್ಯಾಳದಲ್ಲಿ ಅಂಬಾ ಭವಾನಿ ಭವ್ಯ ಪಲ್ಲಕ್ಕಿ ಮೆರವಣಿಗೆ

೨೨ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಸಂಭ್ರಮ; ಕುಂಭಕಳಸ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡ ಮಹಿಳೆಯರು

ಭಾಲ್ಕಿ, ಅ. ೨೭: ತಾಲ್ಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ೨೨ನೇ ವರ್ಷದ ಅಂಬಾ ಭವಾನಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಅಂಬಾ ಭವಾನಿ ದೇವಿಯ ಭವ್ಯ ಪಲ್ಲಕ್ಕಿ ಉತ್ಸವ ಹಾಗೂ ಮೆರವಣಿಗೆ ಭಕ್ತಿಭಾವದಿಂದ ನಡೆಯಿತು.

ಮೆರವಣಿಗೆಯುದ್ದಕ್ಕೂ ಮಹಿಳೆಯರು ಕುಂಭಕಳಸ ಹೊತ್ತು ಸಾಗುವ ಮೂಲಕ ಉತ್ಸವಕ್ಕೆ ವಿಶೇಷ ಮೆರುಗು ನೀಡಿದರು. ಅಕ್ಕಮಹಾದೇವಿ ಭಜನಾ ತಂಡದ ಸದಸ್ಯರು ಕೋಲು ಆಟ ಪ್ರದರ್ಶಿಸಿ ಜನರ ಗಮನ ಸೆಳೆದರು. ಮಕ್ಕಳು ಅಂಬಾ ಭವಾನಿ ದೇವಿಯ ಹಾಡುಗಳಿಗೆ ನೃತ್ಯ ಮಾಡಿದರು. ಯುವಕರು ವಾದ್ಯವೃಂದದ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಶಾಂತಮ್ಮ ಡೊಣಗಾಪುರ, ರಮೇಶ ಹಳೆಂಬರ, ಶಿವರಾಜ ಪಂಚಾಳ, ಕಲ್ಲಪ್ಪ ಹೂಗಾರ ಸೇರಿದಂತೆ ಹಲವರು ದೇವಿಯ ಹಾಡುಗಳಿಗೆ ಹೆಜ್ಜೆ ಹಾಕಿದರು. ಧನರಾಜ ಪೂಜಾರಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ವಿವಿಧ ಬೀದಿಗಳಲ್ಲಿ ಸಂಚರಿಸಿದ ಪಲ್ಲಕ್ಕಿ

ಅಂಬಾ ಭವಾನಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಆರಂಭಗೊಂಡು ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿತು. ಬಳಿಕ ಬಸವೇಶ್ವರ ವೃತ್ತ ಹಾಗೂ ದತ್ತಾತ್ರೇಯ ದೇವಸ್ಥಾನದ ಮಾರ್ಗವಾಗಿ ಸಾಗಿದ ಮೆರವಣಿಗೆ ಅಂಬಾ ಭವಾನಿ ದೇವಸ್ಥಾನದಲ್ಲಿ ಸಮಾರೋಪಗೊಂಡಿತು.

ಮೆರವಣಿಗೆಯುದ್ದಕ್ಕೂ ಪಟಾಕಿಗಳ ಸದ್ದು ಮೊಳಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು ದೇವಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.

ಭಜನಾ ತಂಡಗಳಿಂದ ಸಂಗೀತ ಸೇವೆ

ದಿನವಿಡೀ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಲ್ಲಯ್ಯ ಸ್ವಾಮಿ ಸಿದ್ದೇಶ್ವರ, ಬೀರೆಪ್ಪ ಮಹಾರಾಜ ಮಾಸಿಮಾಡ, ಶಿವರಾಜ ಪಂಚಾಳ, ಸೂರ್ಯಕಾಂತ ಪಂಚಾಳ ಕೂಡ್ಲಿ, ಸುನೀಲ ಪಂಚಾಳ ಕೂಡ್ಲಿ, ಬಸವರಾಜ ಭಾಗ್ಯನಗರ, ಮಾಧವರಾವ್ ಪಾಟೀಲ ಮುರಾಳ, ರವೀಂದ್ರ ಕರಂಜೆ, ಕಲ್ಲಪ್ಪ ಬಿರಾದಾರ ನಾಗರಾಳ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಾಳೂರ ಗ್ರಾಮದ ಬೀರೆಪ್ಪ ಭಜನಾ ತಂಡದ ಮಹಿಳೆಯರು ಸಂಗೀತ ಸೇವೆ ಸಲ್ಲಿಸಿದರು. ನಿಟ್ಟೂರ ಗ್ರಾಮದ ರಘುನಾಥ ಜಟಿಂಗ್ರಾವ್ ವೈಜೆ ಅವರು ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಿದರು.

ಗ್ರಾಮದ ಭಕ್ತರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ಜನರು ಉತ್ಸವದಲ್ಲಿ ಪಾಲ್ಗೊಂಡು ಅಂಬಾ ಭವಾನಿ ದೇವಿಯ ಕೃಪೆಗೆ ಪಾತ್ರರಾದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button