ರಾಜಕೀಯ

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು: ಕಾಂಗ್ರೆಸ್‌ಗೆ ಮುಖಭಂಗ

3,232 ಮತಗಳ ಅಂತರದಿಂದ ಗೆದ್ದ ಶಶೀಲ್ ಜಿ. ನಮೋಶಿ; ವಿಧಾನ ಪರಿಷತ್‌ಗೆ ಐದನೇ ಬಾರಿ ಪ್ರವೇಶ

ಕಲಬುರಗಿ, ಅ. 27: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರನ್ನು 3,232 ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಐದನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 34,784 ಮತದಾರರಿದ್ದು, 30,250 ಮಂದಿ ಮತ ಚಲಾಯಿಸಿದ್ದರು. ಮೊದಲ ಸುತ್ತಿನಲ್ಲಿ 14,001 ಮತಗಳನ್ನು ಎಣಿಕೆ ಮಾಡಲಾಗಿತ್ತು. ಈ ಪೈಕಿ 13,183 ಮತಗಳು ಸಿಂಧುವಾಗಿದ್ದು, 818 ಮತಗಳು ತಿರಸ್ಕೃತಗೊಂಡಿದ್ದವು. ಎರಡನೇ ಸುತ್ತಿನ ಎಣಿಕೆ ಪೂರ್ಣಗೊಂಡ ಬಳಿಕವೂ ನಮೋಶಿ ಮುನ್ನಡೆ ಕಾಯ್ದುಕೊಂಡರು.

ಒಟ್ಟು 28,001 ಮತಗಳನ್ನು ಎಣಿಕೆ ಮಾಡಲಾಗಿದ್ದು, 26,279 ಮತಗಳು ಸಿಂಧುವಾಗಿದ್ದರೆ, 1,722 ಮತಗಳು ತಿರಸ್ಕೃತಗೊಂಡಿವೆ.

ಅಭ್ಯರ್ಥಿಗಳು ಪಡೆದ ಮತಗಳು

ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಒಟ್ಟು 14,531 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರು 11,299 ಮತಗಳನ್ನು ಗಳಿಸಿದರು.

ಇತರ ಅಭ್ಯರ್ಥಿಗಳ ಪೈಕಿ ಆಮ್ ಆದ್ಮಿ ಪಕ್ಷದ ಸಾಯಿಬಣ್ಣ ಜಮಾದಾರ್ 38, ಸಂಯುಕ್ತ ಜನತಾದಳದ ಶಂಕರರೆಡ್ಡಿ ಪಾಟೀಲ 44, ಕವಿರಾಜ್ ನಾಗಣ್ಣ ಮೋತಕಪಲ್ಲಿ 46, ಟಿ.ಕೆ. ದಾಸರ್ 5, ಮಹಬೂಬ್ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ 9, ರಾಜಕುಮಾರ್ ಕೆ. ಕಲಬುರಗಿ 155, ರಾಜು ದೇವಪ್ಪ ಸೋನ್ನ 114, ಶರಣು ಪಿ. ಸುಗೂರ 13, ಶಿವಶಂಕರ ಅಣ್ಣಪ್ಪ ತರನಳ್ಳಿ 8 ಹಾಗೂ ಡಾ. ಸುರೇಶ ದಾವೀದಪ್ಪ 13 ಮತಗಳನ್ನು ಪಡೆದಿದ್ದಾರೆ. ಶಶಿಧರ ಬಸವರಾಜ್ ಅವರು ನಾಲ್ಕು ಮತಗಳನ್ನು ಪಡೆದಿದ್ದಾರೆ ಎಂದು ಮತ ಎಣಿಕೆ ವಿವರಗಳು ತಿಳಿಸಿವೆ.

ಮೊದಲ ಸುತ್ತಿನಿಂದಲೇ ನಮೋಶಿ ಮುನ್ನಡೆ

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಆರಂಭವಾದಾಗ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಶಶೀಲ್ ಜಿ. ನಮೋಶಿ ಅವರು 7,247 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗಿಂತ 1,529 ಮತಗಳ ಮುನ್ನಡೆ ಸಾಧಿಸಿದ್ದರು.

ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ನಮೋಶಿ ಅವರು ಅಂತಿಮವಾಗಿ 14,531 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗೆ 11,299 ಮತಗಳು ಲಭಿಸಿದವು.

ಬಿಜೆಪಿ ಕಾರ್ಯಕರ್ತರ ಸಂಭ್ರಮ

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾಜ್ಯ ವಿಧಾನ ಪರಿಷತ್‌ಗೆ ನಮೋಶಿ ಮರು ಆಯ್ಕೆಯಾಗಿರುವುದನ್ನು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸ್ವಾಗತಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟರು. ರಾಜ್ಯದ ನಾಲ್ಕೂ ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಜನರಿಂದ ಬಂದ ಸಂದೇಶವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದರು. ಈ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದು ಕಾರ್ಯಕರ್ತರ ಗೆಲುವು: ಶಶೀಲ್ ಜಿ. ನಮೋಶಿ

ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಶೀಲ್ ಜಿ. ನಮೋಶಿ, “ಇದು ನನ್ನ ಗೆಲುವಲ್ಲ, ಕಾರ್ಯಕರ್ತರ ಗೆಲುವು. ನನ್ನ ಗೆಲುವಿಗಾಗಿ ಶ್ರಮಿಸಿದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿಕ್ಷಕರು ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡು ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ” ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ, ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಸೇರಿದಂತೆ ಹಲವು ಮುಖಂಡರು ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button