ಅಲಿಯಂಬರ ಗ್ರಾಮದಲ್ಲಿ ಹಾವಗಿಲಿಂಗೇಶ್ವರ ಶ್ರೀಗಳ ಪಟ್ಟಾಧಿಕಾರ ಮಹೋತ್ಸವಕ್ಕೆ ಚಾಲನೆ

ಬೀದರ್, ಅ. 26: ಜಿಲ್ಲೆಯ ತಾಲ್ಲೂಕಿನ ಅಲಿಯಂಬರ ಗ್ರಾಮದ ಗಂಗಾಧರ ಮಠದಲ್ಲಿ ಮಠದ ಉತ್ತರಾಧಿಕಾರಿ ಡಾ. ಹಾವಗಿಲಿಂಗೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಹುಲಸೂರಿನ ಶಿವಾನಂದ ಸ್ವಾಮೀಜಿ ಜ್ಯೋತಿ ಬೆಳಗಿಸುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು. ಮಠಗಳಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡುತ್ತದೆ ಹಾಗೂ ಧರ್ಮದ ಉನ್ನತಿಗೆ ಸಹಕಾರಿಯಾಗುತ್ತದೆ. ಹೀಗಾಗಿ ಪ್ರತಿಯೊಂದು ಗ್ರಾಮದಲ್ಲಿಯೂ ಮಠವಿರಬೇಕು ಎಂದು ಅವರು ಹೇಳಿದರು.
ಇಂದಿನ ದಿನಗಳಲ್ಲಿ ಮನುಷ್ಯನ ಬಳಿ ಹಣ, ಸಂಪತ್ತು ಹಾಗೂ ಎಲ್ಲ ರೀತಿಯ ಸೌಕರ್ಯಗಳಿದ್ದರೂ ಶಾಂತಿ ಮತ್ತು ನೆಮ್ಮದಿ ದೊರೆಯುತ್ತಿಲ್ಲ. ಗುರುಗಳ ವಾಣಿಯನ್ನು ಆಲಿಸಿ, ಧರ್ಮದ ಮಾರ್ಗದಲ್ಲಿ ನಡೆಯುವುದರಿಂದ ಜೀವನದಲ್ಲಿ ನಿಜವಾದ ಆನಂದವನ್ನು ಅನುಭವಿಸಲು ಸಾಧ್ಯ ಎಂದು ತಿಳಿಸಿದರು.
ನಾಲ್ಕು ತಿಂಗಳ ಹಿಂದೆ ಗಂಗಾಧರ ಮಠ ಶಿಥಿಲಾವಸ್ಥೆಯಲ್ಲಿತ್ತು. ಅಲ್ಪಾವಧಿಯಲ್ಲಿಯೇ ಮಠವನ್ನು ಪುನರ್ನಿರ್ಮಿಸಿದ ಡಾ. ಹಾವಗಿಲಿಂಗೇಶ್ವರ ಶಿವಾಚಾರ್ಯರ ಕಾರ್ಯ ಶ್ಲಾಘನೀಯ. ಸಮಾಜಮುಖಿ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡಬೇಕೆಂಬ ಅವರ ಹಂಬಲಕ್ಕೆ ಮಠದ ಪುನರ್ನಿರ್ಮಾಣವೇ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅಲಿಯಂಬರ ಗ್ರಾಮ ನನ್ನ ತಾಯಿಯ ಊರು ಹಾಗೂ ನನ್ನ ಜನ್ಮಭೂಮಿ. ಈ ಗ್ರಾಮದ ಮಠದ ಪೀಠಾಧಿಪತಿಯಾಗುತ್ತಿರುವುದು ನನ್ನ ಸೌಭಾಗ್ಯ ಎಂದು ಡಾ. ಹಾವಗಿಲಿಂಗೇಶ್ವರ ಶಿವಾಚಾರ್ಯರು ಹೇಳಿದರು.
ಉಜ್ಜಯಿನಿ ಪೀಠದ ಶಾಖಾ ಮಠವಾಗಿರುವ ಗಂಗಾಧರ ಮಠವು ಪುರಾತನ ಮಠಗಳಲ್ಲಿ ಒಂದಾಗಿದೆ. ಎಲ್ಲರ ಸಹಕಾರದೊಂದಿಗೆ ಈ ಮಠವನ್ನು ಮಾದರಿ ಮಠವನ್ನಾಗಿ ರೂಪಿಸುವುದರ ಜೊತೆಗೆ, ಮಠದ ಭಕ್ತರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುವುದಾಗಿ ಅವರು ತಿಳಿಸಿದರು.
ಮಠದ ಪುನರ್ನಿರ್ಮಾಣಕ್ಕೆ ಭಕ್ತರು ತನು, ಮನ, ಧನದಿಂದ ಸಹಕರಿಸಿರುವುದು ಸಂತಸ ತಂದಿದೆ. ಭಕ್ತರ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಪಟ್ಟಾಧಿಕಾರ ಮಹೋತ್ಸವ ಆಯೋಜಿಸಿರುವುದು ಹರ್ಷದ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೀದರ್ನ ಲಾಡಗೇರಿ ಹಿರೇಮಠದ ಗಂಗಾಧರ ಶಿವಾಚಾರ್ಯರು, ಹೆಡಗಾಪುರದ ದಾರಕಲಿಂಗ ಶಿವಾಚಾರ್ಯರು, ಪ್ರವಚನಕಾರ ಬಸಯ್ಯ ಶಾಸ್ತ್ರಿ ಪುರಾಣಿಕ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.



