ವೈನ್‌ಶಾಪ್ ಬಳಿ ನಡೆದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಐವರು ಬಂಧನ
ಹಳೆ ದ್ವೇಷವೇ ಕೊಲೆಗೆ ಕಾರಣ; ಆಟೋ ರಿಕ್ಷಾ ಹಾಗೂ ಚಾಕು ವಶಕ್ಕೆ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಎಂ.ಬಿ.ನಗರ ಠಾಣೆ ಪೊಲೀಸರು
ಕಲಬುರಗಿ, ಜು.29: ನಗರದ ಸೇಡಂ ರಸ್ತೆಯ ಸುಷ್ಮಾ ವೈನ್‌ಶಾಪ್ ಸಮೀಪ ಆದರ್ಶನಗರ ನಿವಾಸಿ ರವಿಚಂದ್ರ ಗುತ್ತೇದಾರ್ ಹತ್ಯೆ ಪ್ರಕರಣವನ್ನು ಎಂ.ಬಿ.ನಗರ ಠಾಣೆ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೆಬಿಎನ್ ದರ್ಗಾ ಸಮೀಪದ ನಿವಾಸಿ ಹಾಗೂ ಆಟಿಕೆ ಮಾರಾಟಗಾರ ಅಬ್ದುಲ್ ಇಮ್ತಿಯಾಜ್ (38), ಆಟೋ ಚಾಲಕ ಅಬ್ದುಲ್ ಸಮೀರ್ (29), ಎಲೆಕ್ಟ್ರಿಷಿಯನ್ ಮೊಹಮ್ಮದ್ ಸರಫರಾಜ್ (29), ಛಾಯಾಗ್ರಾಹಕ ಮೊಹಮ್ಮದ್ ಖಲೀಲ್ (29) ಹಾಗೂ ಗೌಂಡಿ ಕೆಲಸಗಾರ ಮೊಹಮ್ಮದ್ ಫಸಿಯೋ (34) ಎಂದು ಗುರುತಿಸಲಾಗಿದೆ.
ಪೊಲೀಸರ ತನಿಖೆಯಲ್ಲಿ, ಮೃತ ರವಿಚಂದ್ರ ಗುತ್ತೇದಾರ್ ವಿರುದ್ಧ ಈ ಹಿಂದೆ ದಾಖಲಾಗಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಳೆಯ ವೈಷಮ್ಯವೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂಬುದು ಬೆಳಕಿಗೆ ಬಂದಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಚು ರೂಪಿಸಿ ಆರೋಪಿಗಳು ಹತ್ಯೆ ನಡೆಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಬಳಸಿದ್ದ ಒಂದು ಆಟೋ ರಿಕ್ಷಾ ಹಾಗೂ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೃತ ರವಿಚಂದ್ರ ಗುತ್ತೇದಾರ್ ಅವರ ಪತ್ನಿ ಜಯಶ್ರೀ ಗುತ್ತೇದಾರ್ ನೀಡಿದ ದೂರಿನ ಮೇರೆಗೆ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಖಾಜಾ ಹುಸೇನ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಜು ಟಾಕಳೆ, ದಸ್ತಯ್ಯ, ಸಂತೋಷ್, ನಾಗರಾಜ್, ಮಹೇಶ್, ಕಾಶಿರಾಮ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ಪೊಲೀಸ್ ತಂಡವನ್ನು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅಭಿನಂದಿಸಿದ್ದಾರೆ.



