ಜಿಲ್ಲಾಸುದ್ದಿ

ಬೆಳೆ ಕಟಾವು ಪ್ರಯೋಗದಲ್ಲಿ ಲೋಪವಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಇಕ್ರಂ ಶರೀಫ್

ಪಾರದರ್ಶಕವಾಗಿ ಪ್ರಯೋಗ ನಡೆಸಿ ರೈತರಿಗೆ ನ್ಯಾಯಸಮ್ಮತ ಬೆಳೆ ವಿಮೆ ಸೌಲಭ್ಯ ಕಲ್ಪಿಸಲು ಸೂಚನೆ

ಕಲಬುರಗಿ, ಸೆ.1: 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳನ್ನು ನಡೆಸುವ ಸಂದರ್ಭದಲ್ಲಿ ಯಾವುದೇ ರೀತಿಯ ತಪ್ಪುಗಳು ಹಾಗೂ ಲೋಪದೋಷಗಳಿಗೆ ಅವಕಾಶ ನೀಡದೆ, ಸಂಪೂರ್ಣ ಪಾರದರ್ಶಕವಾಗಿ ಪ್ರಯೋಗಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅಧಿಕಾರಿಗಳು ಹಾಗೂ ಕ್ಷೇತ್ರ ಪಾಲಕರಿಗೆ ಸೂಚನೆ ನೀಡಿದರು.

ಇತ್ತೀಚೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಮಟ್ಟದ ಮೂಲ ಕಾರ್ಯಕರ್ತರು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ವಿಮಾ ಕಂಪನಿಗಳ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೆಳೆ ಕಟಾವು ಪ್ರಯೋಗಗಳ ನಮೂನೆ-1 ಮತ್ತು ನಮೂನೆ-2 ಅನ್ನು ಕೈಗೊಳ್ಳುವ ಸಂದರ್ಭದಲ್ಲಿ ನಿಯಮಾನುಸಾರ ನಿಖರತೆಯನ್ನು ಕಾಪಾಡಬೇಕು. ಪ್ರಯೋಗಗಳ ವೇಳೆ ಯಾವುದೇ ರೀತಿಯ ತಪ್ಪುಗಳು ಅಥವಾ ಲೋಪದೋಷಗಳು ಉಂಟಾಗದಂತೆ ಅಧಿಕಾರಿಗಳು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಬೆಳೆ ಕಟಾವು ಪ್ರಯೋಗಗಳ ನಿಖರತೆ ಹಾಗೂ ಪಾರದರ್ಶಕತೆಯನ್ನು ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ. ಇದರ ಮೂಲಕ ರೈತರ ಬೆಳೆ ಇಳುವರಿಯ ವಾಸ್ತವಿಕ ಚಿತ್ರಣ ಲಭ್ಯವಾಗುವುದರ ಜೊತೆಗೆ, ಅರ್ಹ ರೈತರಿಗೆ ನ್ಯಾಯಸಮ್ಮತವಾಗಿ ಬೆಳೆ ವಿಮೆ ಸೌಲಭ್ಯ ದೊರಕಿಸಲು ಸಾಧ್ಯವಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಬೆಳೆ ಕಟಾವು ಪ್ರಯೋಗಗಳನ್ನು ನಿಗದಿತ ನಿಯಮಗಳು ಮತ್ತು ಮಾರ್ಗಸೂಚಿಗಳಂತೆ ನಡೆಸಬೇಕು. ಕ್ಷೇತ್ರ ಮಟ್ಟದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್‌ ನಿರ್ದೇಶನ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹಿರಿಯ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ, ಡಾ. ಬಾಲರಾಜ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button