ಅಪರಾಧ

ಬಾರ್ ಮಾಲೀಕರ ತಮ್ಮನ ಮೇಲೆ ನಕಲಿ ಪಿಸ್ತೂಲ್ ತೋರಿಸಿ ಕೊಲೆ ಯತ್ನ; ಇಬ್ಬರ ಬಂಧನ

ಬಾರ್‌ನಲ್ಲಿ ಗಲಾಟೆ ಬಳಿಕ ಜೀವ ಬೆದರಿಕೆ; ನಕಲಿ ಪಿಸ್ತೂಲ್ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ ಅಶೋಕನಗರ ಠಾಣೆ ಪೊಲೀಸರು

ಕಲಬುರಗಿ, ಜು.29: ನಗರದ ಬಿದ್ದಾಪುರ ಕಾಲೋನಿಯ ಅಫಜಲಪುರ ಕ್ರಾಸ್ ಸಮೀಪದ ಬೀರಲಿಂಗೇಶ್ವರ ಬಾರ್ ಅಂಡ್ ಗಾರ್ಡನ್ ರೆಸ್ಟೋರೆಂಟ್‌ನಲ್ಲಿ ಬಾರ್ ಮಾಲೀಕರ ತಮ್ಮನಿಗೆ ನಕಲಿ ಪಿಸ್ತೂಲ್ ತೋರಿಸಿ ಕೊಲೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನಕಲಿ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಎನ್‌ಎಸ್‌ಕೆ ಮಿಲ್ ಪ್ರದೇಶದ ಇಕ್ಬಾಲ್ ಕಾಲೋನಿ ನಿವಾಸಿ ಸೈಯದ್ ಜಿಲಾನಿ ಅಲಿಯಾಸ್ ರೇತಿ ಬಾಬಾ (36) ಹಾಗೂ ಹುಸೇನ್ ಗಾರ್ಡನ್ ಸಮೀಪದ ಇಕ್ಬಾಲ್ ಕಾಲೋನಿ ನಿವಾಸಿ ಜಾವೇದ್ ಪಟೇಲ್ (35) ಎಂದು ಗುರುತಿಸಲಾಗಿದೆ.

ಜುಲೈ 22ರಂದು ಮಧ್ಯಾಹ್ನ ಇಬ್ಬರು ಆರೋಪಿಗಳು ಬಾರ್‌ಗೆ ಬಂದು ಮದ್ಯ ಸೇವಿಸಿದ ಬಳಿಕ ಸಿಬ್ಬಂದಿಯೊಂದಿಗೆ ಗಲಾಟೆ ನಡೆಸಿದ್ದರು. ಬಾರ್‌ನ ವ್ಯವಸ್ಥಾಪಕರು ಪರಿಸ್ಥಿತಿಯನ್ನು ಸಮಾಧಾನಪಡಿಸಲು ಮುಂದಾದರೂ, ನಂತರ ಬಾರ್ ಮಾಲೀಕರ ತಮ್ಮ ಶರಣು ಕಪನೂರ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಸೈಯದ್ ಜಿಲಾನಿ ತನ್ನ ಬಳಿ ಇದ್ದ ಪಿಸ್ತೂಲ್‌ನಂತಿದ್ದ ನಕಲಿ ಆಯುಧವನ್ನು ತೋರಿಸಿ ಜೀವ ಬೆದರಿಕೆ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಬಾರ್ ವ್ಯವಸ್ಥಾಪಕ ಪ್ರಶಾಂತ್ ಜಮಾದಾರ್ ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಬಳಿಯಿಂದ ಪಿಸ್ತೂಲ್‌ನಂತೆ ಕಾಣುವ ಒಂದು ನಕಲಿ ಗ್ಯಾಸ್ ಲೈಟರ್ (ಪಿಸ್ತೂಲ್ ಮಾದರಿ) ವಶಪಡಿಸಿಕೊಳ್ಳಲಾಗಿದೆ.

ನಗರ ಪೊಲೀಸ್ ಉಪ ಆಯುಕ್ತರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಸತೀಶ್ ಕಣಮೇಶ್ವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ವೈಜನಾಥ, ಮಲ್ಲಿಕಾರ್ಜುನ ಮೇತ್ರೆ, ಶಿವಪ್ರಕಾಶ್, ಮುಜಾಹಿದ್, ನೀಲಕಂಠರಾಯ ಪಾಟೀಲ್, ಚಂದ್ರಶೇಖರ್, ಹರಿಕಿಶೋರ್ ಸೇರಿದಂತೆ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಅಶೋಕನಗರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button