ರಾಜ್ಯ

30 ವರ್ಷಗಳ ಬಳಿಕ ಮಂಜಾರಾ ನದಿ ಬರಿದಾಗುವ ಆತಂಕ; 95% ನದಿಪಾತ್ರ ಖಾಲಿ

ಮಳೆ ಕೊರತೆಯಿಂದ ಬೀದರ್ ಜಿಲ್ಲೆಯಲ್ಲಿ ಜಲಬಿಕ್ಕಟ್ಟು ತೀವ್ರ; ರೈತರು, ಜನರು ಹಾಗೂ ಜಾನುವಾರುಗಳ ಆತಂಕ ಹೆಚ್ಚಳ

ಬೀದರ್, ಜು.28: ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬೀದರ್ ಜಿಲ್ಲೆಯ ಜೀವನಾಡಿಯಾಗಿರುವ ಮಂಜಾರಾ ನದಿಯು ಬಹುತೇಕ ಬರಿದಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ತಿಂಗಳಿನಿಂದ ಸಮರ್ಪಕ ಮಳೆಯಾಗದ ಕಾರಣ ನದಿಯ ಸುಮಾರು 95 ಶೇಕಡಾ ಭಾಗ ಖಾಲಿಯಾಗಿದ್ದು, ಜಿಲ್ಲೆಯಾದ್ಯಂತ ಕುಡಿಯುವ ನೀರು ಹಾಗೂ ಕೃಷಿಗೆ ಸಂಕಷ್ಟ ಎದುರಾಗಿದೆ.

ಬೀದರ್ ಜಿಲ್ಲೆಯ ಪ್ರಮುಖ ಜಲಮೂಲವಾಗಿರುವ ಮಂಜಾರಾ ನದಿಯ ನೀರನ್ನೇ ಅವಲಂಬಿಸಿರುವ ಭಾಲ್ಕಿ, ಹುಲಸೂರು, ಔರಾದ್ ಹಾಗೂ ಬೀದರ್ ತಾಲೂಕುಗಳ ಜನತೆ ಈಗ ತೀವ್ರ ಆತಂಕದಲ್ಲಿದ್ದಾರೆ. ನದಿಯ ನೀರಿನ ಮಟ್ಟ ಕುಸಿದ ಪರಿಣಾಮ ರೈತರು, ಸಾರ್ವಜನಿಕರು, ಜಾನುವಾರುಗಳು ಹಾಗೂ ಪಕ್ಷಿಗಳಿಗೆ ನೀರಿನ ಕೊರತೆ ಉಂಟಾಗಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ನದಿಯ ದಡದಲ್ಲಿರುವ ಕೃಷಿಭೂಮಿಗಳಲ್ಲಿ ನೀರಿನ ಅಭಾವದಿಂದ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಹರಸಾಹಸ ಪಡುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.

ಇನ್ನೂ ಸುಮಾರು 15 ದಿನಗಳೊಳಗೆ ಸಮರ್ಪಕ ಮಳೆಯಾಗದಿದ್ದರೆ ಮಂಜಾರಾ ನದಿ ಸಂಪೂರ್ಣವಾಗಿ ಬರಿದಾಗುವ ಅಪಾಯವಿದ್ದು, ಕೃಷಿ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ನೀರಿನ ಪೂರೈಕೆಯಲ್ಲಿ ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಆಡಳಿತವು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button