‘ಜನ ನಾಯಕನ್’ ಯುಕೆನಲ್ಲಿ ಅನ್ಕಟ್ ಬಿಡುಗಡೆ: ಸಿಎಂ ವಿಜಯ್ ಅವರ ಕೊನೆಯ ಚಿತ್ರ ಜುಲೈ 24ಕ್ಕೆ ತೆರೆಗೆ
ಭಾರತದಲ್ಲಿ 'ಎ' ಪ್ರಮಾಣಪತ್ರ ಪಡೆದ ಬಳಿಕ ಯುನೈಟೆಡ್ ಕಿಂಗ್ಡಮ್ನಲ್ಲಿ ಯಾವುದೇ ಕತ್ತರಿ ಇಲ್ಲದೆ ಪ್ರದರ್ಶನ; ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ

ಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅಭಿನಯದ ಬಹುನಿರೀಕ್ಷಿತ ಮತ್ತು ಅವರ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ ‘ಜನ ನಾಯಕನ್’ ಜುಲೈ 24ರಂದು ಯುನೈಟೆಡ್ ಕಿಂಗ್ಡಮ್ (ಯುಕೆ) ಚಿತ್ರಮಂದಿರಗಳಲ್ಲಿ ಯಾವುದೇ ಕತ್ತರಿ ಇಲ್ಲದ ಮೂಲ ಆವೃತ್ತಿಯಲ್ಲಿ (ಅನ್ಕಟ್) ಬಿಡುಗಡೆಯಾಗಲಿದೆ.
ಯುಕೆ ವಿತರಕ ಅಹಿಂಸಾ ಎಂಟರ್ಟೈನ್ಮೆಂಟ್ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ಭಾರತದಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಚಿತ್ರಕ್ಕೆ ‘ಎ’ (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡಿದ ಬೆನ್ನಲ್ಲೇ ಈ ಘೋಷಣೆ ಮಾಡಲಾಗಿದೆ.
ವಿತರಕರು ಸಾಮಾಜಿಕ ಜಾಲತಾಣದಲ್ಲಿ, “ಜುಲೈ 24ರಂದು ಯುಕೆ ಚಿತ್ರಮಂದಿರಗಳಲ್ಲಿ ‘ಜನ ನಾಯಕನ್’ ಅನ್ಕಟ್ ರೂಪದಲ್ಲಿ ಬಿಡುಗಡೆಯಾಗಲಿದೆ. ಎಲ್ಲಾ ಆಕ್ಷನ್, ಮಾಸ್ ಹಾಗೂ ‘ತಳಪತಿ’ ಸಂಭ್ರಮವನ್ನು ನಿರ್ದೇಶಕರು ಉದ್ದೇಶಿಸಿದಂತೆಯೇ ಕೊನೆಯ ಬಾರಿ ಅನುಭವಿಸುವ ಅವಕಾಶ ಇದು” ಎಂದು ತಿಳಿಸಿದ್ದಾರೆ.
ಮತ್ತೊಂದು ಪ್ರಕಟಣೆಯಲ್ಲಿ, “ನಮ್ಮ ತಳಪತಿಗೆ ವಿಭಿನ್ನ ರೀತಿಯ ಬೀಳ್ಕೊಡೆಯನ್ನು ವಿಧಿಯೇ ನೀಡಿದೆ. ‘ಜನ ನಾಯಕನ್’ ಜುಲೈ 24ರಂದು ಯುಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಟಿಕೆಟ್ ಮಾರಾಟ ಆರಂಭವಾಗಿದೆ” ಎಂದು ತಿಳಿಸಲಾಗಿದೆ.
ಸೆನ್ಸಾರ್ ಪ್ರಕ್ರಿಯೆ ಏಳು ತಿಂಗಳು
ಮಾಧ್ಯಮ ವರದಿಗಳ ಪ್ರಕಾರ, ಚಿತ್ರದ ಸೆನ್ಸಾರ್ ಪ್ರಕ್ರಿಯೆ ಸುಮಾರು ಏಳು ತಿಂಗಳುಗಳ ಕಾಲ ಮುಂದುವರಿದಿತ್ತು. ಪ್ರಮಾಣಪತ್ರ ನೀಡುವ ಮೊದಲು ಚಿತ್ರದಲ್ಲಿ 12 ಬದಲಾವಣೆಗಳನ್ನು ಮಾಡುವಂತೆ ಸಿಬಿಎಫ್ಸಿ ಸೂಚಿಸಿತ್ತು ಎನ್ನಲಾಗಿದೆ.
ಈ ಬದಲಾವಣೆಗಳಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಸಂಬಂಧಿಸಿದ ಕೆಲವು ಉಲ್ಲೇಖಗಳು, ಕೆಲವು ಸಂಭಾಷಣೆಗಳು, ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ದೃಶ್ಯಗಳು, ಕೆಲವು ಆಕ್ಷನ್ ದೃಶ್ಯಗಳು ಹಾಗೂ ಧಾರ್ಮಿಕ ಉಲ್ಲೇಖಗಳನ್ನು ಪರಿಷ್ಕರಿಸುವಂತೆ ಸೂಚಿಸಲಾಗಿತ್ತು ಎಂದು ವರದಿಯಾಗಿದೆ.
ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಅಪಾರ ಜನಪ್ರಿಯತೆ ಹೊಂದಿರುವ ವಿಜಯ್ ಅವರ ಕೊನೆಯ ಚಿತ್ರ ಎಂಬ ಕಾರಣಕ್ಕೆ ‘ಜನ ನಾಯಕನ್’ ಈಗಾಗಲೇ ಭಾರೀ ಕುತೂಹಲ ಮೂಡಿಸಿದ್ದು, ವಿಶೇಷವಾಗಿ ಯುಕೆನಲ್ಲಿ ಅನ್ಕಟ್ ಆವೃತ್ತಿ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.



