ಶಿಕ್ಷಣ

ರಾಷ್ಟ್ರೀಯ ಶಿಕ್ಷಣ ನೀತಿ ಉನ್ನತ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತಂದಿದೆ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಎನ್‌ಇಪಿ-2020 ಅನುಷ್ಠಾನದ ಆರು ವರ್ಷಗಳ ಸಾಧನೆಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಶೇಷ ಕಾರ್ಯಕ್ರಮ

ಕಲಬುರಗಿ, ಆ.1: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-2020) ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಐತಿಹಾಸಿಕ ಹಾಗೂ ಸಮಗ್ರ ಬದಲಾವಣೆಗಳನ್ನು ತಂದಿದ್ದು, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಬಹುಶಾಖಾ ಅಧ್ಯಯನಕ್ಕೆ ಹೊಸ ದಿಕ್ಕು ನೀಡಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಖಿಲ ಭಾರತೀಯ ಶಿಕ್ಷಣ ಸಮಾಗಮ (ABSS) ಆಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನದ ಆರು ವರ್ಷಗಳ ಯಶಸ್ಸಿನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎನ್‌ಇಪಿ-2020 ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ದೂರದೃಷ್ಟಿಯ ಪರಿವರ್ತನೆಗೆ ಕಾರಣವಾಗಿದ್ದು, ಬಹುಶಾಖಾ ಶಿಕ್ಷಣ, ಮೌಲ್ಯಾಧಾರಿತ ಹಾಗೂ ಕೌಶಲಾಧಾರಿತ ಪಠ್ಯಕ್ರಮ, ಅಪ್ರೆಂಟಿಸ್‌ಶಿಪ್ ಅವಕಾಶಗಳು ಹಾಗೂ ವಿದ್ಯಾರ್ಥಿ ಕೇಂದ್ರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಹೇಳಿದರು.

ಈ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ಉದ್ಯೋಗ, ನವೋದ್ಯಮ, ಉದ್ಯಮಶೀಲತೆ ಹಾಗೂ ಜೀವನಪರ್ಯಂತ ಕಲಿಕೆಯತ್ತ ಸಜ್ಜಾಗುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎಬಿಸಿ), ಡಿಜಿಟಲ್ ಕಲಿಕೆ ಹಾಗೂ ಹೊಸ ಶೈಕ್ಷಣಿಕ ಅವಕಾಶಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ನಾಲ್ಕು ವರ್ಷದ ಪದವಿ ಕಾರ್ಯಕ್ರಮದ ಮೊದಲ ಬ್ಯಾಚ್ 2025-26ನೇ ಶೈಕ್ಷಣಿಕ ವರ್ಷದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಎನ್‌ಇಪಿ ಅನುಷ್ಠಾನದ ಮಹತ್ವದ ಮೈಲಿಗಲ್ಲಾಗಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಗ್ರಂಥಾಲಯ, ಪ್ರಯೋಗಾಲಯಗಳು ಹಾಗೂ ಒನ್ ನೇಷನ್-ಒನ್ ಸಬ್‌ಸ್ಕ್ರಿಪ್ಷನ್ (ONOS) ಯೋಜನೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಲಾ ವಿಭಾಗದ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಇತರ ವಿಭಾಗಗಳ ಪಠ್ಯಗಳನ್ನು ಸಹ ಆಯ್ಕೆ ಮಾಡಿಕೊಂಡು ಬಹುಶಾಖಾ ಅಧ್ಯಯನದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆಗಾಗಿ ಹೆಚ್ಚಿನ ಅಂಕ ಹಾಗೂ ಉತ್ತಮ ಸಿಜಿಪಿಎ ಗಳಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಪರೀಕ್ಷಾ ನಿಯಂತ್ರಕ (ಪ್ರಭಾರ) ಪ್ರೊ. ಭರತ್ ಕುಮಾರ್ ಮಾತನಾಡಿ, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎಬಿಸಿ) ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ರೆಡಿಟ್‌ಗಳು ಸ್ವಯಂಚಾಲಿತವಾಗಿ ದಾಖಲೆಯಾಗುತ್ತಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಕಲಿಕೆಯ ಸಮನ್ವಯಕ್ಕೆ ಇದು ನೆರವಾಗುತ್ತಿದೆ ಎಂದು ವಿವರಿಸಿದರು.

ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಸಂದೀಪ್ ಸ್ವಯಂ ಪೋರ್ಟಲ್ ಕುರಿತು ಮಾಹಿತಿ ನೀಡಿ, ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಆನ್‌ಲೈನ್ ಕೋರ್ಸ್‌ಗಳಲ್ಲಿ ನೋಂದಾಯಿಸಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಭಾರ ಕುಲಸಚಿವ ಪ್ರೊ. ವೆಂಕಟ ರಮಣ ದೊಡ್ಡಿ, ಎನ್‌ಇಪಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರೊ. ಚನ್ನವೀರ ಆರ್.ಎಂ., ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎನ್‌ಇಪಿ ಅನುಷ್ಠಾನಕ್ಕೆ ಶ್ರಮಿಸಿದ ಅಧ್ಯಾಪಕರನ್ನು ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button