ಆರೋಗ್ಯ

ಕೆಬಿಎನ್ ಆಸ್ಪತ್ರೆಯಲ್ಲಿ ಸಿಪಿಆರ್ ಜಾಗೃತಿ ಕಾರ್ಯಕ್ರಮ

ಹೃದಯ ಸ್ತಂಭನ ಸಂದರ್ಭ ಜೀವ ಉಳಿಸುವ ಸಿಪಿಆರ್ ಕುರಿತು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಪ್ರಾಯೋಗಿಕ ತರಬೇತಿ

ವಿಶ್ವ ಹೃದಯ-ಶ್ವಾಸಕೋಶ ಪುನಶ್ಚೇತನ (ಸಿಪಿಆರ್) ದಿನದ ಅಂಗವಾಗಿ ನಗರದ ಕೆಬಿಎನ್ ಆಸ್ಪತ್ರೆಯಲ್ಲಿ ಭಾರತೀಯ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಸಹಯೋಗದೊಂದಿಗೆ ಮಂಗಳವಾರ ಸಿಪಿಆರ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಿದ್ಧಲಿಂಗ ಚೆಂಗಟಿ ಅವರು ಸಿಪಿಆರ್‌ನ ಮಹತ್ವ, ಅದನ್ನು ಯಾವ ಸಂದರ್ಭದಲ್ಲಿ ಮಾಡಬೇಕು, ಹೇಗೆ ಮಾಡಬೇಕು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಸಿಪಿಆರ್ ಜೀವ ಉಳಿಸುವಲ್ಲಿ ಹೇಗೆ ನೆರವಾಗುತ್ತದೆ ಎಂಬುದರ ಕುರಿತು ವಿವರವಾಗಿ ತಿಳಿಸಿದರು.

ವಿಭಾಗದ ಪ್ರಾಧ್ಯಾಪಕ ಡಾ. ಚರಣರಾಜ್ ಅವರು ಮಕ್ಕಳಿಗೆ ನೀಡುವ ಸಿಪಿಆರ್ ಕುರಿತು ಮಾಹಿತಿ ನೀಡಿದರು. ಒಂದು ವರ್ಷದೊಳಗಿನ ಮಕ್ಕಳಿಗೆ ಹಾಗೂ ದೊಡ್ಡ ಮಕ್ಕಳಿಗೆ ಸಿಪಿಆರ್ ನೀಡುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಡಾ. ವಿಜಯ ಅವರು ಸಿಪಿಆರ್‌ನ ವಿವಿಧ ಹಂತಗಳು ಹಾಗೂ ತಾಂತ್ರಿಕ ಅಂಶಗಳನ್ನು ವಿವರಿಸಿದರು.

ವೈದ್ಯಕೀಯ ಕಾಲೇಜಿನ ಡೀನ್ ಡಾ. ಗುರುಪ್ರಸಾದ್ ಕಾರ್ಯಕ್ರಮವನ್ನು ಅಭಿನಂದಿಸಿ, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇಂತಹ ತರಬೇತಿಗಳ ಮೂಲಕ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪ್ರದರ್ಶನ ನೀಡಲಾಯಿತು. ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗೆ ಸಿಪಿಆರ್ ನೀಡಿದ ಸಿಸಿಟಿವಿ ದೃಶ್ಯಾವಳಿಯನ್ನು ಪ್ರದರ್ಶಿಸಿ, ಅದರ ಮಹತ್ವವನ್ನು ವಿವರಿಸಲಾಯಿತು.

ವಿಭಾಗದ ಮುಖ್ಯಸ್ಥ ಡಾ. ವಿನೋದ್ ಉಪಳಾಂವಕರ ಕಾರ್ಯಕ್ರಮವನ್ನು ನಿರೂಪಿಸಿದರು. ಆಡಳಿತಾಧಿಕಾರಿ ಡಾ. ರಾಧಿಕಾ, ಡಾ. ರಾಜು ಮಾಳಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button