ಆರೋಗ್ಯಜಿಲ್ಲಾಸುದ್ದಿ

ದುಶ್ಚಟಗಳಿಂದ ಯುವಜನತೆ ದೂರವಿರಿ: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

‘ಬೇಡ ಬ್ರೋ’, ‘ಆಪರೇಷನ್ ರೈಸ್’ ಅಭಿಯಾನದಡಿ ಕಲಬುರಗಿಯಲ್ಲಿ ಬೃಹತ್ ವಾಕ್‌ಥಾನ್; 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭಾಗಿ

ಕಲಬುರಗಿ, ಸೆ.2- ನವ ಭಾರತ ನಿರ್ಮಾಣದಲ್ಲಿ ಯುವ ಕರ್ನಾಟಕದ ಪಾತ್ರ ಮಹತ್ವದ್ದಾಗಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಯುವಜನತೆ ಮಾದಕ ವಸ್ತು ಸೇರಿದಂತೆ ಎಲ್ಲ ರೀತಿಯ ದುಶ್ಚಟಗಳಿಂದ ದೂರವಿರಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಕರೆ ನೀಡಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ‘ಬೇಡ ಬ್ರೋ’, ‘ಆಪರೇಷನ್ ರೈಸ್’, ‘ನಶಾ ಮುಕ್ತ ಯುವ ಕರ್ನಾಟಕ’ ಮತ್ತು ಅಂಗಾಂಗ ದಾನ ಅಭಿಯಾನದ ಅಂಗವಾಗಿ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿದ್ದ ಬೃಹತ್ ವಾಕ್‌ಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಶಾ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆ ರಾಜ್ಯಾದ್ಯಂತ ‘ಬೇಡ ಬ್ರೋ’ ಹಾಗೂ ‘ಆಪರೇಷನ್ ರೈಸ್’ ಅಭಿಯಾನಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವೂ ಇದಕ್ಕೆ ಕೈಜೋಡಿಸಿದ್ದು, ಕಲಬುರಗಿಯಲ್ಲಿ 17ನೇ ಜಿಲ್ಲಾ ಮಟ್ಟದ ಅಭಿಯಾನ ಆಯೋಜಿಸಲಾಗಿದೆ ಎಂದರು.

ಯುವಜನರ ಮೂಲಮಂತ್ರ ‘ಮಾದಕ ವಸ್ತುಗಳಿಗೆ ಬೇಡ, ಜೀವನಕ್ಕೆ ಹೌದು, ಆರೋಗ್ಯ ಮತ್ತು ದೈಹಿಕ ಕ್ಷಮತೆಗೆ ಹೌದು’ ಎಂಬಂತಿರಬೇಕು. ವಿದ್ಯಾರ್ಥಿಗಳು ವ್ಯಸನಕ್ಕೆ ದಾರಿ ಮಾಡಿಕೊಡುವ ಕೆಟ್ಟ ಸಹವಾಸದಿಂದ ದೂರವಿರಬೇಕು. ಸ್ನೇಹಿತರಲ್ಲಿ ಯಾರಾದರೂ ವ್ಯಸನದ ಜಾಲಕ್ಕೆ ಸಿಲುಕಿರುವುದು ಕಂಡುಬಂದರೆ ಅವರನ್ನು ದೂರ ಮಾಡದೆ, ವ್ಯಸನದಿಂದ ಹೊರಬರಲು ನೆರವಾಗಬೇಕು ಎಂದು ಸಚಿವರು ಹೇಳಿದರು.

ಪ್ರತಿದಿನ ಕನಿಷ್ಠ ಒಂದು ಗಂಟೆಯನ್ನು ವ್ಯಾಯಾಮ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿಡಬೇಕು. ಆರೋಗ್ಯ ಎಂದರೆ ಕೇವಲ ದೈಹಿಕ ಸದೃಢತೆ ಮಾತ್ರವಲ್ಲ, ಮಾನಸಿಕ ದೃಢತೆಯೂ ಒಳಗೊಂಡಿದೆ. ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳು ಒತ್ತಡ ಕಡಿಮೆ ಮಾಡಲು, ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಸಕಾರಾತ್ಮಕ ಚಿಂತನೆ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಮಾದಕ ವಸ್ತುಗಳ ಮಾರಾಟ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ ಸಾರ್ವಜನಿಕರು ಧೈರ್ಯದಿಂದ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ಮೂರು ವರ್ಷದಲ್ಲಿ 22,899 ಪ್ರಕರಣ ದಾಖಲು

ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಮಾತನಾಡಿ, ಕರ್ನಾಟಕ ರಾಜ್ಯ ಹಾಗೂ ಕಲಬುರಗಿ ನಗರವನ್ನು ಮಾದಕ ವಸ್ತು ಮುಕ್ತಗೊಳಿಸಲು ಪೊಲೀಸ್ ಇಲಾಖೆ ಸಂಕಲ್ಪ ಮಾಡಿದೆ. ಇದಕ್ಕಾಗಿ ‘ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಸೇರಿದಂತೆ ವಿವಿಧ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಮಾದಕ ವಸ್ತುಗಳ ನಿರ್ಮೂಲನೆ ಕೇವಲ ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಯುವಜನತೆ, ಸಮುದಾಯ ಹಾಗೂ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದರು.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ 22,899 ಪ್ರಕರಣಗಳು ದಾಖಲಾಗಿವೆ. 795 ಕೋಟಿ ರೂ. ಮೌಲ್ಯದ 28,292 ಕೆ.ಜಿ. ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 31,271 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈವರೆಗೆ 9,556 ಜನರಿಗೆ ಶಿಕ್ಷೆಯಾಗಿದೆ ಎಂದು ಮಾಹಿತಿ ನೀಡಿದರು.

ಹಿಂದೆ ಮಾದಕ ವಸ್ತು ಮಾರಾಟಗಾರರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗುತ್ತಿತ್ತು. ಇದೀಗ ಸೇವನೆ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತಿದೆ. ಯಾವುದೇ ಸ್ಥಳದಲ್ಲಿ ಮಾದಕ ವಸ್ತುಗಳ ಸೇವನೆ ಅಥವಾ ಮಾರಾಟದಂತಹ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.

ನಗರದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿರುವ 480 ಜನರನ್ನು ಗುರುತಿಸಲಾಗಿದ್ದು, ‘ಸನ್ಮಿತ್ರ’ ಯೋಜನೆಯಡಿ ಅವರನ್ನು ದುಶ್ಚಟದಿಂದ ಹೊರತರಲು ಪ್ರಯತ್ನಿಸಲಾಗುತ್ತಿದೆ. ಈವರೆಗೆ ಸುಮಾರು 200 ಯುವಜನರನ್ನು ವ್ಯಸನದಿಂದ ಹೊರತರಲಾಗಿದೆ ಎಂದು ಡಾ. ಶರಣಪ್ಪ ತಿಳಿಸಿದರು.

ಕಾಲೇಜು ಆವರಣಗಳು ನಶಾಮುಕ್ತವಾಗಲಿ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಮಾತನಾಡಿ, ನಮ್ಮ ನಾಡು, ಸಮಾಜ ಹಾಗೂ ರಾಜ್ಯ ಆರೋಗ್ಯವಂತವಾಗಬೇಕಾದರೆ ಮೊದಲು ಕಾಲೇಜು ಆವರಣಗಳು ನಶಾಮುಕ್ತವಾಗಬೇಕು. ಇದಕ್ಕಾಗಿ ಸಾಮೂಹಿಕ ಹೋರಾಟ ಅಗತ್ಯವಿದೆ ಎಂದರು.

ವಿಶ್ವವಿದ್ಯಾಲಯವು ಶೈಕ್ಷಣಿಕ ಜವಾಬ್ದಾರಿಯ ಜತೆಗೆ ಸಾಮಾಜಿಕ ಬದ್ಧತೆಯ ಭಾಗವಾಗಿ ನಶಾಮುಕ್ತ ಕ್ಯಾಂಪಸ್ ನಿರ್ಮಾಣದ ಅಭಿಯಾನ ನಡೆಸುತ್ತಿದೆ. ಈವರೆಗೆ 16 ಜಿಲ್ಲೆಗಳಲ್ಲಿ ವಾಕ್‌ಥಾನ್ ಆಯೋಜಿಸಲಾಗಿದ್ದು, 600ಕ್ಕೂ ಹೆಚ್ಚು ಸಂಸ್ಥೆಗಳ ಸುಮಾರು 1.41 ಲಕ್ಷ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

18ರಿಂದ 30 ವರ್ಷದೊಳಗಿನ ಯುವಜನರು ಮತ್ತು ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕ ವಸ್ತುಗಳ ಜಾಲಕ್ಕೆ ಸಿಲುಕುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇದು ಜೀವನವನ್ನು ಕಟ್ಟಿಕೊಳ್ಳುವ ವಯಸ್ಸು. ಇದೇ ಸಂದರ್ಭದಲ್ಲಿ ಒಂದು ತಪ್ಪು ನಿರ್ಧಾರ, ಕೆಟ್ಟ ಸ್ನೇಹ ಅಥವಾ ಕ್ಷಣಿಕ ಕುತೂಹಲ ಇಡೀ ಕುಟುಂಬದ ಭವಿಷ್ಯವನ್ನೇ ಹಾಳುಮಾಡಬಹುದು ಎಂದು ಅವರು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ. ನಮೋಶಿ, ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಐಜಿಪಿ ಶಾಂತನು ಸಿನ್ಹಾ, ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿಇಒ ರಾಹುಲ ಸಂಕನೂರ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್‌ಪಿ ಮಹೇಶ್ ಮೇಘಣ್ಣನವರ, ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಸಿ.ಆರ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ. ಭಗವಾನ್ ಬಿ.ಸಿ. ಅವರು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯಕ್ಕೆ ನಶಾಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಮಾದಕ ವಸ್ತುಗಳನ್ನು ತ್ಯಜಿಸುವ ಹಾಗೂ ಅಂಗಾಂಗ ದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ಜೀವನದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಬಿಂಬಿಸುವ ಕಿರು ನಾಟಕ ಪ್ರದರ್ಶಿಸಿದರು.

8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭಾಗಿ

ವೇದಿಕೆ ಕಾರ್ಯಕ್ರಮದ ಬಳಿಕ ಡಿ.ಎ.ಆರ್. ಪೊಲೀಸ್ ಪರೇಡ್ ಮೈದಾನದಿಂದ ಆರಂಭಗೊಂಡ ಬೃಹತ್ ವಾಕ್‌ಥಾನ್‌ಗೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಚಾಲನೆ ನೀಡಿ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು.

ವಾಕ್‌ಥಾನ್ ಏಷ್ಯನ್ ಮಾಲ್, ಐವಾನ್-ಎ-ಶಾಹಿ, ಜಿಲ್ಲಾಧಿಕಾರಿ ಕಚೇರಿ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಹಾಗೂ ಆರ್ಕಿಡ್ ಮಾಲ್ ಮಾರ್ಗವಾಗಿ ಸಾಗಿತು. ಬಳಿಕ ಡಿ.ಎ.ಆರ್. ಪೊಲೀಸ್ ಮೈದಾನದ ಬಳಿಯ ಹೆಲಿಪ್ಯಾಡ್‌ನಲ್ಲಿ ವಾಕ್‌ಥಾನ್ ಮುಕ್ತಾಯಗೊಂಡಿತು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ವಿವಿಧ ಕಾಲೇಜುಗಳ 8 ಸಾವಿರಕ್ಕೂ ಹೆಚ್ಚು ನೋಂದಾಯಿತ ವಿದ್ಯಾರ್ಥಿಗಳು, ಬೋಧಕರು ಹಾಗೂ ಸಿಬ್ಬಂದಿ ವಾಕ್‌ಥಾನ್‌ನಲ್ಲಿ ಭಾಗವಹಿಸಿ ನಶಾಮುಕ್ತ ಸಮಾಜ ನಿರ್ಮಾಣಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button