ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಕರುನಾಡ ವಿಜಯಸೇನೆ ವಿರೋಧ
ಕರ್ನಾಟಕದ ಹಿತಾಸಕ್ತಿ ಕಾಪಾಡುವಂತೆ ಒತ್ತಾಯಿಸಿ ಲೋಕಸಭಾ ಸದಸ್ಯರಿಗೆ ಮನವಿ

ಕಲಬುರಗಿ, ಆ.4: ಕಾವೇರಿ ನೀರು ನಿರ್ವಹಣಾ ಸಮಿತಿಯು ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ನೀಡಿರುವ ಶಿಫಾರಸನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಜಿಲ್ಲಾ ಅಧ್ಯಕ್ಷ ಪೃಥ್ವಿರಾಜ್ ಎಸ್. ರಾಂಪೂರ್ ಹಾಗೂ ಯುವ ಘಟಕದ ಅಧ್ಯಕ್ಷ ನಾಗರಾಜ್ ಮಾಯತ್ರಿ ಅವರು ಲೋಕಸಭಾ ಸದಸ್ಯರಿಗೆ ಮನವಿ ಸಲ್ಲಿಸಿದರು.
ರಾಜ್ಯದ ಹಲವಾರು ಜಿಲ್ಲೆಗಳು ಈಗಾಗಲೇ ಬರಪೀಡಿತ ಪ್ರದೇಶಗಳಾಗಿದ್ದು, ಕೆಆರ್‌ಎಸ್ ಜಲಾಶಯದಲ್ಲಿಯೂ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವಾಗ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಆದೇಶಿಸಿರುವುದು ಕರ್ನಾಟಕದ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದರು.
ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದ್ದು, ಮೊದಲ ಆದ್ಯತೆ ರಾಜ್ಯದ ಕುಡಿಯುವ ನೀರು ಹಾಗೂ ರೈತರ ನೀರಾವರಿ ಅಗತ್ಯಗಳಿಗೆ ನೀಡಬೇಕು. ಮಂಡ್ಯ ಸೇರಿದಂತೆ ಕಾವೇರಿ ಕಣಿವೆಯ ರೈತರು ನೀರಿನ ಕೊರತೆಯಿಂದ ಸಂಕಷ್ಟದಲ್ಲಿರುವುದರಿಂದ ರಾಜ್ಯ ಸರ್ಕಾರ ತಕ್ಷಣವೇ ಮರುಪರಿಶೀಲನಾ ಅರ್ಜಿ ಸಲ್ಲಿಸಿ ಕಾನೂನು ಹೋರಾಟವನ್ನು ಬಲವಾಗಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಜನರ ಕುಡಿಯುವ ನೀರು ಮತ್ತು ರೈತರ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು. ಈ ವಿಷಯವನ್ನು ಸಂಸತ್ತಿನಲ್ಲಿ ರಾಜ್ಯದ ಪರವಾಗಿ ಪ್ರಬಲವಾಗಿ ಪ್ರಸ್ತಾಪಿಸುವಂತೆ ಸಂಸದರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ರಾಜು ಗುಂಟ್ರಾಳ್, ತಾಲ್ಲೂಕು ಅಧ್ಯಕ್ಷ ಕಲ್ಯಾಣಿ ತಳವಾರ, ಉಪಾಧ್ಯಕ್ಷ ಪ್ರಭುಲಿಂಗ ಪೂಜಾರಿ, ಚಿಂಚೋಳಿ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಪವನ್ ಕಟ್ಟಿಮನಿ, ಶಿವಪ್ಪ ಸೇರಿದಂತೆ ಸಂಘಟನೆಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.



