ಆರೋಗ್ಯಜಿಲ್ಲಾಸುದ್ದಿ

ಆರೋಗ್ಯಕರ ಬದುಕಿಗೆ ಆಯುರ್ವೇದ, ಸಾಂಪ್ರದಾಯಿಕ ಆಹಾರ ಪದ್ಧತಿ ಅಗತ್ಯ

‘ಉತ್ತರ ಕರ್ನಾಟಕದ ರೊಟ್ಟಿ–ತರಕಾರಿ ಆಹಾರ ಪೌಷ್ಟಿಕ’ : ಅರುಣಕುಮಾರ ಪಾಟೀಲ

ಕಲಬುರಗಿ, ಸೆ.23: ಆಯುರ್ವೇದವು ಕೇವಲ ಚಿಕಿತ್ಸಾ ಪದ್ಧತಿಯಲ್ಲ. ಅದು ನಮ್ಮ ದೈನಂದಿನ ಆಹಾರ, ಜೀವನಶೈಲಿ ಹಾಗೂ ಆರೋಗ್ಯ ಸಂರಕ್ಷಣೆಯೊಂದಿಗೆ ಬೆಸೆದುಕೊಂಡಿರುವ ಜೀವನ ಕ್ರಮವಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ ಹೇಳಿದರು.

ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಆರೋಗ್ಯಕರ ನಾಳೆಗಳಿಗಾಗಿ ಆಯುರ್ವೇದ’ ಘೋಷವಾಕ್ಯದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ರೊಟ್ಟಿ ಹಾಗೂ ತರಕಾರಿಗೆ ಪ್ರಮುಖ ಸ್ಥಾನವಿದ್ದು, ಈ ಆಹಾರ ಪದ್ಧತಿ ಪೌಷ್ಟಿಕವಾಗಿದೆ. ವಿದ್ಯಾರ್ಥಿಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಉತ್ತಮ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ‘ಏನು ತಿನ್ನಬೇಕು, ಏನು ತಿನ್ನಬಾರದು’ ಎಂಬುದರ ಕುರಿತು ಶಾಲಾ ಪಠ್ಯಪುಸ್ತಕಗಳಲ್ಲಿ ಮಾಹಿತಿ ಅಳವಡಿಸಲು ಆಯುಷ್ ಇಲಾಖೆಯ ಉನ್ನತಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮಾರುಕಟ್ಟೆಯಲ್ಲಿ ದೊರೆಯುವ ಅನಗತ್ಯ ಬೇಕರಿ ಉತ್ಪನ್ನಗಳು, ಚಿಪ್ಸ್, ಚಾಕೊಲೇಟ್ ಸೇರಿದಂತೆ ಜಂಕ್ ಫುಡ್‌ಗಳ ಸೇವನೆಯಿಂದ ದೂರವಿದ್ದು ನೈಸರ್ಗಿಕ ಆಹಾರಕ್ಕೆ ಆದ್ಯತೆ ನೀಡಬೇಕು. ನಿಯಮಿತ ವ್ಯಾಯಾಮ, ಧ್ಯಾನ ಹಾಗೂ ಸಮತೋಲಿತ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ–ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯ ರಕ್ಷಣೆ ಹಾಗೂ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಜೀವನ ಕ್ರಮದ ಭಾಗ ಆಯುರ್ವೇದ

ಆಯುಷ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ ಪಾಟೀಲ ಮಾತನಾಡಿ, ಆಯುರ್ವೇದವು ಕೇವಲ ವೈದ್ಯಕೀಯ ಪದ್ಧತಿಯಲ್ಲ. ನಮ್ಮ ಸಂಪ್ರದಾಯ, ಜ್ಞಾನ ಮತ್ತು ವಿಜ್ಞಾನವನ್ನು ಒಳಗೊಂಡಿರುವ ಸಮಗ್ರ ಜೀವನ ಕ್ರಮವಾಗಿದೆ. ‘ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣೆ’ ಎಂಬುದು ಆಯುರ್ವೇದದ ಪ್ರಮುಖ ಧ್ಯೇಯವಾಗಿದ್ದು, ಆರೋಗ್ಯವಂತ ವ್ಯಕ್ತಿಯ ಆರೋಗ್ಯವನ್ನು ಕಾಪಾಡುವುದು ಹಾಗೂ ರೋಗಿಯ ರೋಗವನ್ನು ಗುಣಪಡಿಸುವುದು ಇದರ ಉದ್ದೇಶವಾಗಿದೆ ಎಂದರು.

ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಲು ಆಯುರ್ವೇದದಲ್ಲಿ ತಿಳಿಸಿರುವ ದಿನಚರ್ಯೆ ಮತ್ತು ಋತುಚರ್ಯೆ ನಿಯಮಗಳನ್ನು ಪಾಲಿಸುವುದು ಅಗತ್ಯ. ಇಂದಿನ ಒತ್ತಡದ ಜೀವನದಲ್ಲಿ ಆಯುರ್ವೇದ, ಯೋಗ ಮತ್ತು ಪ್ರಾಣಾಯಾಮದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸಮಯಕ್ಕೆ ತಕ್ಕ ಆಹಾರ, ವಿಶ್ರಾಂತಿ ಮುಖ್ಯ

ಸೆಂಟ್ ಜಾನ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಮಲ್ಲಾರಾವ್ ಮಲ್ಲೆ ಮಾತನಾಡಿ, ದೇಹದ ಆರೋಗ್ಯವು ಆಹಾರ ಸೇವನೆ, ವಿಶ್ರಾಂತಿ ಹಾಗೂ ಜೀವನಶೈಲಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು ಮತ್ತು ವಿಶ್ರಾಂತಿ ಪಡೆಯುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕಲಬುರಗಿಯ ಶ್ರೀ ಬಸವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರಸಶಾಸ್ತ್ರ ಹಾಗೂ ಭೈಷಜ್ಯ ಕಲ್ಪನಾ ವಿಭಾಗದ ಪ್ರಾಧ್ಯಾಪಕಿ ಡಾ. ಜಯಲಕ್ಷ್ಮಿ ಹಾಗೂ ಸಹ ಪ್ರಾಧ್ಯಾಪಕಿ ಡಾ. ಸಹನಾ ವಿಶೇಷ ಉಪನ್ಯಾಸ ನೀಡಿದರು.

ಡಿ.ಎಚ್.ಒ ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಆಯುಷ್ ಇಲಾಖೆಯ ವಿವಿಧ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಾ. ಅರುಂಧತಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಆಯುಷ್ (ಪ್ರಭಾರ) ಅಧಿಕಾರಿ ಡಾ. ರವೀಂದ್ರ ಸಿ. ಹೂಗಾರ ಸ್ವಾಗತಿಸಿದರು. ಡಾ. ರಾಜೇಶ್ವರಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button